ಮಂಡ್ಯ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಜಾ ಸೇವೆ ಆಂದೋಲನದಲ್ಲಿ ಸಾರ್ವಜನಿಕರು ನೀಡುವ ದೂರು ಮತ್ತು ಸರ್ಕಾರದ ಸವಲತ್ತುಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತ್ವರಿತವಾಗಿ ಸಮಸ್ಯೆ ಬಗೆಹರಿಸಬೇಕೆಂದು ತಹಶೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ಸೂಚನೆ ನೀಡಿದರು.
ಮದ್ದೂರು ತಾಲೂಕಿನ ಆತಗೂರು ಗ್ರಾಮದಲ್ಲಿ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಆದೇಶದಂತೆ ಪ್ರತಿ ತಾಲ್ಲೂಕು, ಹೋಬಳಿ ಸೇರಿದಂತೆ ಎಲ್ಲಾ ಗ್ರಾ.ಪಂ ವ್ಯಾಪ್ತಿಗಳಲ್ಲಿ ಪ್ರತಿ ಶನಿವಾರ ಪ್ರಜಾಸೇವೆ ಆಂದೋಲನ ಕಾರ್ಯಕ್ರಮವನ್ನು ನಡೆಸಲಾಗುವುದು. ಇದು ಜನರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಸರ್ಕಾರದ ಹೊಸ ಯೋಜನೆಯಾಗಿದೆ. ಸಾರ್ವಜನಿಕರು ನೀಡುವ ದೂರುಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತ್ವರಿತವಾಗಿ ಸಮಸ್ಯೆ ಬಗೆಹರಿಸಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.
ತಾಪಂ ಇಓ ರಾಮಲಿಂಗಯ್ಯ ಮಾತನಾಡಿ, ರಾಜ್ಯ ಸರ್ಕಾರವು ನೂತನವಾಗಿ ಸ್ಥಾಪಿಸಿರುವ ಪ್ರಜಾಸೇವಾ ಇಲಾಖೆಯ ವತಿಯಿಂದ ಹೋಬಳಿವಾರು ಪ್ರಜಾಸೇವಾ ಅಭಿಯಾನ ಏರ್ಪಡಿಸಿ ಜನಸಾಮಾನ್ಯರಿಂದ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಕೆಲವು ಅರ್ಜಿಗಳಿಗೆ ಪರಿಹಾರ ನೀಡಲಾಗುತ್ತಿದೆ ಹೀಗಾಗಿ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಪ್ರಜಾ ಸೇವೆ ಕಾರ್ಯಕ್ರಮದಲ್ಲಿ ನಿಡಘಟ್ಟ ಗ್ರಾ.ಪಂ ಮಾಜಿ ಅಧ್ಯಕ್ಷ ಎನ್.ಆರ್.ಪ್ರಕಾಶ್ ಮಾತನಾಡಿ ಗ್ರಾಮಕ್ಕೆ ಹಿಂದಿನಿಂದಲೂ ಸಾರ್ವಜನಿಕ ಸ್ಮಶಾನ ಇಲ್ಲದೇ ಜನರಿಗೆ ತೊಂದರೆಯಾಗಿದ್ದು ಕೂಡಲೇ ಸಮಸ್ಯೆ ಬಗೆಹರಿಸಬೇಕು ಹಾಗೂ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರ್ಪಡೆಗೊಳಿಸಬೇಕೆಂದು ಎಂದು ಆಗ್ರಹಿಸಿ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ರವರಿಗೆ ಅಹವಾಲು ಸಲ್ಲಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ, ಸೆಸ್ಕಾಂ, ಆಹಾರ, ಶಿಶು ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರಿಗೆ ಸೇರಿದಂತೆ ವಿವಿಧ ಇಲಾಖೆಗಳಗಳಿಂದ 190 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು.
ಕಾರ್ಯಕ್ರಮದಲ್ಲಿ ಬಿಇಓ ಧನಂಜಯ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪರಮೇಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ರವಿಶಂಕರ್, ನೀವು ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ್, ಚೆಸ್ಕಾಂ ಇಇ ಶಿವಕುಮಾರ್, ಎಡಿಎಲ್ಆರ್ ಲಿಖಿತ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.