ಭೂಮಿಯ ಶೇಕಡಾ 70 ಕ್ಕೂ ಹೆಚ್ಚು ಭಾಗವನ್ನು ಆವರಿಸಿರುವ ಸಾಗರಗಳು ಕೇವಲ ನೀರನ್ನು ಒದಗಿಸುವ ಮೂಲಗಳಾಗಿ ಮಾತ್ರವಲ್ಲದೆ, ಜಗತ್ತಿನ ಹವಾಮಾನ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಾಗರದ ನೀರಿನಲ್ಲಿರುವ ಉಪ್ಪಿನಂಶವು ಕಡಲ ಜೀವಿಗಳ ಉಳಿವು, ಸಾಗರ ಪ್ರವಾಹಗಳು ಹಾಗೂ ಭೂಮಿಯ ವಾತಾವರಣದ ಮೇಲೆ ನೇರ ಪ್ರಭಾವ ಬೀರುತ್ತದೆ. ಆದರೆ, ಒಂದು ವೇಳೆ ಈ ಭಾರಿ ಪ್ರಮಾಣದ ಸಾಗರ ನೀರು ಏಕಾಏಕಿ ತನ್ನ ಉಪ್ಪಿನಂಶವನ್ನು ಕಳೆದುಕೊಂಡು ಸಿಹಿ ನೀರಾಗಿ ಬದಲಾದರೆ ಏನಾಗಬಹುದು ಎಂಬ ಪ್ರಶ್ನೆಗೆ ವಿಜ್ಞಾನಿಗಳು ಕಳವಳಕಾರಿ ಉತ್ತರಗಳನ್ನು ನೀಡಿದ್ದಾರೆ.
ಸಮುದ್ರ ನೀರು ಉಪ್ಪಾಗಿದ್ದು ಹೇಗೆ ?
ಆರಂಭಿಕ ದಿನಗಳಲ್ಲಿ ಭೂಮಿಯ ಮೇಲಿದ್ದ ಸಾಗರಗಳು ಸಂಪೂರ್ಣವಾಗಿ ಉಪ್ಪಿನಂಶದಿಂದ ಕೂಡಿಸಿರಲಿಲ್ಲ. ಕೋಟಿಗಟ್ಟಲೆ ವರ್ಷಗಳ ಹಿಂದೆ ವಾತಾವರಣದಲ್ಲಿದ್ದ ಕಾರ್ಬನ್ ಡೈಆಕ್ಸೈಡ್ ಜೊತೆ ಮಳೆ ನೀರು ಮಿಶ್ರಣಗೊಂಡು ಸಾಂದ್ರೀಕೃತ ಆಮ್ಲದ ರೂಪ ಪಡೆಯಿತು. ಈ ಮಳೆ ನೀರು ಬಂಡೆಗಳು ಮತ್ತು ಕಲ್ಲುಗಳನ್ನು ಸವೆಸಿದಾಗ ಅದರಲ್ಲಿದ್ದ ಖನಿಜಾಂಶಗಳು ಹಾಗೂ ಲವಣಗಳು ನದಿಗಳ ಮೂಲಕ ಹರಿದು ಸಾಗರಗಳನ್ನು ಸೇರಿದವು. ಇದರ ಜೊತೆಗೆ ಜ್ವಾಲಾಮುಖಿ ಸ್ಫೋಟಗಳು ಮತ್ತು ಸಾಗರದ ತಳದಲ್ಲಿರುವ ಬಿಸಿ ನೀರಿನ ಬುಗ್ಗೆಗಳು ಕಡಲಿಗೆ ಖನಿಜಗಳನ್ನು ಸೇರಿಸಿದವು. ಪ್ರಸ್ತುತ ಭೂಮಿಯ ಮೇಲಿರುವ ನೀರಿನಲ್ಲಿ ಶೇಕಡಾ 97 ರಷ್ಟು ನೀರು ಉಪ್ಪು ನೀರಾಗಿದ್ದು, ಪ್ರತಿ ಲೀಟರ್ ಸಮುದ್ರದ ನೀರಿನಲ್ಲಿ ಸರಾಸರಿ 35 ಗ್ರಾಂನಷ್ಟು ಕರಗಿದ ಲವಣಾಂಶವಿದೆ.
ಜೀವವೈವಿಧ್ಯ ಮತ್ತು ಸಾಗರ ಪ್ರವಾಹಕ್ಕೆ ಭಾರಿ ಧಕ್ಕೆ
ಸಮುದ್ರದ ನೀರು ಸಿಹಿ ನೀರಾಗಿ ಬದಲಾದರೆ ಕಡಲ ಜೀವಿಗಳ ಮೇಲೆ ಅತ್ಯಂತ ಭೀಕರ ಪರಿಣಾಮ ಬೀರಲಿದೆ. ಮೀನುಗಳು, ಏಡಿಗಳು, ಸಿಗಡಿಗಳು ಹಾಗೂ ಸೂಕ್ಷ್ಮಜೀವಿಗಳು ಕೇವಲ ಉಪ್ಪು ನೀರಿನ ವಾತಾವರಣದಲ್ಲಿ ಜೀವಿಸಲು ರೂಪಾಂತರಗೊಂಡಿರುತ್ತವೆ. ಈ ವಾತಾವರಣ ಹಠಾತ್ತಾಗಿ ಬದಲಾದರೆ, ಅವುಗಳ ದೇಹದಲ್ಲಿನ ಜಲ ಸಮತೋಲನ ಏರುಪೇರಾಗಿ ಶೇಕಡಾ 90 ಕ್ಕೂ ಹೆಚ್ಚು ತಳಿಗಳು ನಾಶವಾಗುವ ಅಪಾಯವಿದೆ. ಸಾಲ್ಮನ್ ಹಾಗೂ ಈಲ್ ರೀತಿಯ ಕೆಲವೇ ಕೆಲವು ಮೀನುಗಳ ತಳಿಗಳು ಮಾತ್ರ ಎರಡೂ ಮಾದರಿಯ ನೀರಿನಲ್ಲಿ ಜೀವಿಸಬಲ್ಲವು.
ಇದಲ್ಲದೆ, ಕಡಲ ಆಹಾರ ಸರಪಳಿಯ ತಳಹದಿಯಾಗಿರುವ ಪ್ಲಾಂಕ್ಟನ್ ಮತ್ತು ಸೂಕ್ಷ್ಮ ಸಸ್ಯ ಜೀವಿಗಳು ನಶಿಸಿಹೋದರೆ, ಅವುಗಳನ್ನು ನಂಬಿರುವ ದೊಡ್ಡ ಮೀನುಗಳು ಹಾಗೂ ತಿಮಿಂಗಿಲಗಳ ಸಂಕುಲವೇ ನಾಶವಾಗಲಿದೆ. ಮತ್ತೊಂದೆಡೆ, ಉಪ್ಪಿನಂಶ ಮತ್ತು ಉಷ್ಣಾಂಶದ ವ್ಯತ್ಯಾಸದಿಂದಾಗಿ ನಡೆಯುವ ಸಾಗರ ಪ್ರವಾಹಗಳ ಚಲನೆ ಸ್ತಬ್ಧಗೊಳ್ಳಲಿದೆ. ಇದು ಜಾಗತಿಕ ಮಟ್ಟದಲ್ಲಿ ಭಾರಿ ಗಾಳಿ, ಮಳೆ, ಚಂಡಮಾರುತ ಹಾಗೂ ತಾಪಮಾನದ ತೀವ್ರ ಏರುಪೇರಿಗೆ ಕಾರಣವಾಗಲಿದೆ. ವಾತಾವರಣಕ್ಕೆ ಅಗಾಧ ಪ್ರಮಾಣದ ಆಮ್ಲಜನಕ ಪೂರೈಸುವ ಕಡಲ ಸಸ್ಯಗಳು ನಶಿಸಿದರೆ ಭೂಮಿಯ ಗಾಳಿಯ ಗುಣಮಟ್ಟವೂ ಹದಗೆಡಲಿದೆ.
ಸಮುದ್ರ ನೀರನ್ನು ಸಂಪೂರ್ಣ ಸಿಹಿ ನೀರಾಗಿ ಮಾಡಲು ಸಾಧ್ಯವೇ ?
ಇಂದಿನ ತಂತ್ರಜ್ಞಾನ ಬಳಸಿ ಸಮುದ್ರದ ನೀರನ್ನು ಉಪ್ಪುಮುಕ್ತಗೊಳಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸುವ ಘಟಕಗಳು ಕಾರ್ಯಾಚರಿಸುತ್ತಿವೆ. ಆದರೆ ಸಂಪೂರ್ಣ ಸಾಗರವನ್ನು ಸಿಹಿ ನೀರಾಗಿ ಬದಲಾಯಿಸುವುದು ಕಾರ್ಯಸಾಧ್ಯವಲ್ಲ. ಇದಕ್ಕೆ ಅಗಾಧ ಪ್ರಮಾಣದ ಇಂಧನ ಮತ್ತು ಶಕ್ತಿಯ ಅಗತ್ಯವಿದೆ. ಅಲ್ಲದೆ, ನೀರಿನಿಂದ ಉಪ್ಪನ್ನು ಬೇರ್ಪಡಿಸಿದಾಗ ರೂಪುಗೊಳ್ಳುವ ಕೋಟ್ಯಂತರ ಟನ್ ಸಾಂದ್ರೀಕೃತ ತ್ಯಾಜ್ಯ ಲವಣವನ್ನು ಎಲ್ಲೂ ವಿಲೇವಾರಿ ಮಾಡಲು ಸಾಧ್ಯವಿಲ್ಲ.
ಆದ್ದರಿಂದ ಸಾಗರದಲ್ಲಿರುವ ಉಪ್ಪಿನಂಶವು ಕೇವಲ ನೀರನ್ನು ಕುಡಿಯದಂತೆ ತಡೆಯುವ ವಸ್ತುವಲ್ಲ. ಬದಲಾಗಿ, ಇಡೀ ಜೀವಸಂಕೇತ ವ್ಯವಸ್ಥೆಯನ್ನು ಮತ್ತು ಭೂಮಿಯ ಹವಾಮಾನವನ್ನು ಸುಸ್ಥಿತಿಯಲ್ಲಿಡುವ ಅತ್ಯಂತ ಪ್ರಮುಖ ನೈಸರ್ಗಿಕ ಅಂಶವಾಗಿದೆ.