ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಸುಪ್ರಸಿದ್ಧ ಧಾರ್ಮಿಕ ಶಕ್ತಿಪೀಠವಾದ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ 11 ದಿನಗಳ ಕಾಲ ವೈಭವದಿಂದ ಜರುಗಲಿರುವ ವಾರ್ಷಿಕ ನವರಾತ್ರಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆತಿದೆ. ನವರಾತ್ರಿ ಮಹೋತ್ಸವದ ಅಂಗವಾಗಿ ಸಿಗಂದೂರು ಚೌಡಮ್ಮ ದೇವಿಗೆ ವಿಶೇಷ ಪಂಚಾಮೃತಾಭಿಷೇಕ, ಮಹಾಪೂಜೆ ಮತ್ತು ಅಲಂಕಾರ ಸೇವೆ ನೆರವೇರಿದ ಬಳಿಕ, ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ದೀಪ ಬೆಳಗಿಸುವ ಮೂಲಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ನೀಡಿದರು.

ಸಿಗಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಶಾಸಕ ಗೋಪಾಲಕೃಷ್ಣ ಬೇಳೂರು
ಉತ್ಸವ ಉದ್ಘಾಟಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, "ಸಿಗಂದೂರು ಚೌಡೇಶ್ವರಿ ಕ್ಷೇತ್ರವು ಕೇವಲ ಮಲೆನಾಡಿಗಷ್ಟೇ ಅಲ್ಲದೆ ದೇಶ-ವಿದೇಶಗಳ ಕೋಟ್ಯಂತರ ಭಕ್ತರ ನಂಬಿಕೆಯ ಪವಿತ್ರ ತಾಣವಾಗಿದೆ. ಶರಾವತಿ ಹಿನ್ನೀರಿನ ಈ ಪುಣ್ಯಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಮೂಲಸೌಕರ್ಯ, ರಸ್ತೆ ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನೂತನ ಸೇತುವೆ ನಿರ್ಮಾಣದ ಬಳಿಕ ಕ್ಷೇತ್ರಕ್ಕೆ ಭಕ್ತರ ಹರಿವು ದುಪ್ಪಟ್ಟಾಗಿದ್ದು, ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಸಿಗಂದೂರನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ತಾಯಿ ಚೌಡೇಶ್ವರಿಯು ಸಮಸ್ತ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಮಳೆ-ಬೆಳೆ ಕರುಣಿಸಲಿ" ಎಂದು ಹಾರೈಸಿದರು.

ಭಕ್ತಿ ಮತ್ತು ನಂಬಿಕೆಯಿಂದ ಕಷ್ಟಗಳು ಪರಿಹಾರ: ಮಂಜುನಾಥ ಭಾರತಿ ಸ್ವಾಮೀಜಿ ಆಶೀರ್ವಚನ
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಬೆಂಗಳೂರಿನ ಗವಿಪುರಂ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ವೇದಾಂತಾಚಾರ್ಯ ಶ್ರೀ ಶ್ರೀ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿ, "ನವರಾತ್ರಿ ಎಂಬುದು ಶಕ್ತಿಯ ಉಪಾಸನೆಯ ಪರಮ ಪವಿತ್ರ ಕಾಲ. ದುಷ್ಟ ಶಕ್ತಿಗಳ ಸಂಹಾರ ಮಾಡಿ ಸನ್ಮಾರ್ಗವನ್ನು ತೋರುವ ಜಗನ್ಮಾತೆ ಚೌಡೇಶ್ವರಿಯ ಆರಾಧನೆಯಿಂದ ಸಕಲ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ. ಆಧ್ಯಾತ್ಮಿಕ ಚಿಂತನೆಗಳು ಮತ್ತು ಭಕ್ತಿ ಮಾರ್ಗ ಮನುಷ್ಯನ ಅಹಂಕಾರವನ್ನು ಅಳಿಸಿ ಶಾಂತಿಯನ್ನು ನೀಡುತ್ತವೆ. ಧಾರ್ಮಿಕತೆಯ ಜೊತೆಗೆ ಸಾಮಾಜಿಕ ಸೌಹಾರ್ದತೆಯನ್ನು ಎತ್ತಿಹಿಡಿಯುವ ಕಾರ್ಯಗಳು ನಿರಂತರವಾಗಿ ನಡೆಯಬೇಕು" ಎಂದು ನುಡಿದರು.

ಶಿಸ್ತುಬದ್ಧ ದರ್ಶನ ಮತ್ತು 'ರಂಗ ನವರಾತ್ರಿ' ವಿಶೇಷ: ಧರ್ಮದರ್ಶಿ ಡಾ. ಎಸ್. ರಾಮಪ್ಪ
ಶ್ರೀ ಕ್ಷೇತ್ರದ ಅನುವಂಶೀಯ ಧರ್ಮದರ್ಶಿ ಡಾ. ಎಸ್. ರಾಮಪ್ಪ ಅವರು ಮಾತನಾಡಿ, "ಪ್ರತಿವರ್ಷದಂತೆ ಈ ಬಾರಿಯೂ ನವರಾತ್ರಿ ದಿನಗಳಲ್ಲಿ ನಿತ್ಯ ಮುಂಜಾನೆಯಿಂದ ತಡರಾತ್ರಿಯವರೆಗೆ ದುರ್ಗಾ ಹವನ, ಚಂಡಿಕಾ ಹೋಮ, ಕುಂಕುಮಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಧಾರ್ಮಿಕ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಲಿವೆ. ಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ, ವಸತಿ ಹಾಗೂ ಸರತಿ ಸಾಲಿನಲ್ಲಿ ಶಿಸ್ತುಬದ್ಧ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಈ ಬಾರಿ ಶರಾವತಿ ಜಲಾಶಯ ಮುಳುಗಡೆ ನೆಲದ ಕಥೆಗಳನ್ನು ಆಧರಿಸಿದ ವಿದ್ಯಾರ್ಥಿಗಳ 'ರಂಗ ನವರಾತ್ರಿ' ನಾಟಕ ಪ್ರದರ್ಶನವು ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ" ಎಂದು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿ
ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್‌ನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್., ಸಾಗರ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಡಾ. ಬೆನಕ ಪ್ರಸಾದ್, ಮುಖಂಡರಾದ ಗಣಪತಿ ಮಂಡಗಳಲೆ, ಚೇತನ್ ರಾಜ್ ಕಣ್ಣೂರು, ಜಯರಾಂ, ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್‌ಐ, ಕಬ್ದೂರು ದೇವರಾಜ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಟ್ರಸ್ಟ್ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..