ಬೆಂಗಳೂರು: ಕಳವಿನಲ್ಲಿ ನಿಪುಣನಾದ ಕಳ್ಳನೊಬ್ಬ ತನ್ನ ಸಹೋದ್ಯೋಗಿಗಳಿಗೆ ಪಾಠ ಹೇಳಿದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಹೇಳಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಪುಟದ ಸದಸ್ಯರಿಗೆ ಸ್ಟಿಂಗ್ ಮಾಡುತ್ತಾರೆ; ಆದ್ದರಿಂದ ಹುಷಾರಾಗಿರಿ ಅಂತ ಹೇಳಬೇಕಿಲ್ಲ. ಅದು ಬಿಟ್ಟು ಪ್ರಾಮಾಣಿಕವಾಗಿರಿ ಎಂದು ಹೇಳಬೇಕಿತ್ತು ಎಂದು ತಿಳಿಸಿದರು. ಒಬ್ಬ ಕಳ್ಳ ಸಿಕ್ಕಿಬೀಳದಂತೆ ಫಿಂಗರ್ ಪ್ರಿಂಟ್ ಗುರುತು ಹಾಗೂ ಮುಖಚರ್ಯೆ ಸಿಗದಂತೆ ನೋಡಿಕೊಳ್ಳಿ ಎಂದು ಹೇಳುವ ಮಾದರಿಯಲ್ಲಿ ಸಿಎಂ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಿಕ್ಕಿಹಾಕಿಕೊಳ್ಳದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿಯವರು ಯಾವುದೇ ಭ್ರಷ್ಟಾಚಾರ ಮಾಡಬೇಡಿ ಎಂದು ಒಳ್ಳೆಯ ಮಾತುಗಳನ್ನು ಸಚಿವರಿಗೆ ಹೇಳಬೇಕಿತ್ತು. ಆದರೆ ಅಂತಹ ಮಾತುಗಳನ್ನು ಹೇಳಿಲ್ಲ. ಏಕೆಂದರೆ ಈ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಒಂದೊಂದು ಇಲಾಖೆಗಳೂ ಹಗರಣದಲ್ಲಿ ತೊಡಗಿವೆ. ಅಂತಹುದರಲ್ಲಿ ಪ್ರಾಮಾಣಿಕತೆ ಬಗ್ಗೆ ಬೋಧನೆ ಮಾಡುವ ನೈತಿಕತೆಯೇ ಇಲ್ಲ ಎಂದರು.
ಕಾಂಗ್ರೆಸ್ ಯಾವುದರಲ್ಲೂ ಯಶಸ್ಸು ಸಾಧಿಸಿಲ್ಲ...
ಎಸ್‍ಐಆರ್ ವಿರುದ್ಧÀ ಹೋರಾಟ ಮಾಡಿದರೆ ಅದು ಸಂವಿಧಾನದ ವಿರುದ್ಧದ ಹೋರಾಟದಂತೆ. ಇವರು ಹೋರಾಟ ಮಾಡಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಸಂಚು ನಡೆಸುತ್ತಿದ್ದಾರೆ. ಈ ಹಿಂದೆ ಸಿಎಎ ವಿರುದ್ಧ ಹೋರಾಟ ಮಾಡಿ ವಿಫಲವಾದರು. ಅಸಹಿಷ್ಣುತೆ ಅಂತ ಸೃಷ್ಟಿಸಿದರು, ರೈತರ ಬೇಡಿಕೆ ಸಂಬಂಧ ಸಂಸತ್ತಿಗೆ ಮುತ್ತಿಗೆ ಹಾಕಲು ನೋಡಿದರು. ಅದರಲ್ಲೂ ಯಶಸ್ಸು ಸಿಗಲಿಲ್ಲ. ನಂತರ ನೀಟ್ ವಿಚಾರದಲ್ಲೂ ಅರಾಜಕತೆ ಸೃಷ್ಟಿಗೆ ಯತ್ನಿಸಿದರು. ಅದರಲ್ಲೂ ಸಫಲರಾಗಲಿಲ್ಲ. ಲಿಂಚಿಂಗ್, ಪ್ರಶಸ್ತಿ ವಾಪಸ್ ಮಾಡಿದರು. ಈಗ ಎಸ್‍ಐಆರ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇದರಲ್ಲೂ ದ್ವಂದ್ವ ನಿಲುವು ತೋರಿಸುತ್ತಾ ಇದ್ದಾರೆ. ನಕಲಿ ಮತಗಳಿವೆ ಎನ್ನುವ ಇವರು ನಕಲಿ ಮತಗಳ ಪರಿಷ್ಕರಣೆಗೆ ತಡೆ ಹಾಕುತ್ತಾರೆ ಎಂದು ಟೀಕಿಸಿದರು.
ಕಾಂಗ್ರೆಸ್‍ನವರಿಗೆ ಮುಖ್ಯ ಚುನಾವಣಾ ಆಯುಕ್ತರು ಗುರಿ ಅಲ್ಲ. ಅವರ ಗುರಿ ಸಂವಿಧಾನ. ಪ್ರಜಾಪ್ರಭುತ್ವ ಹಾಳು ಮಾಡುವುದು. ಇದಕ್ಕೆ ಇವರು ವಿದೇಶಿ ನೆರವು ಪಡೆದಿರುವ ಅನುಮಾನ ಇದೆ. ಮೋದಿ ಜೀ ಅವರು ಮೂರನೇ ಬಾರಿ ಪ್ರಧಾನಿಯಾಗಿರುವುದು, ಬಿಜೆಪಿ ಅಧಿಕಾರದಲ್ಲಿರುವುದನ್ನು ಸಹಿಸಲು ಇವರಿಗೆ ಆಗುತ್ತಿಲ್ಲ ಎಂದು ಆರೋಪಿಸಿದರು.