ಸಾಗರ: ಬೋರ್‌ವೆಲ್ ಕೊರೆದು ಸಮೃದ್ಧ ನೀರು ಬಿದ್ದಿದೆ. ಪಂಪ್ ಸೆಟ್ ಅಳವಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ, ಸ್ಟಾರ್ಟರ್ ಕೂಡ ಫಿಕ್ಸ್ ಮಾಡಲಾಗಿದೆ. ಆದರೆ ದುರಂತವೆಂದರೆ ಸಕಲ ವ್ಯವಸ್ಥೆ ಸಿದ್ಧವಾಗಿ ಬರೋಬ್ಬರಿ ಎರಡು ವರ್ಷಗಳೇ ಕಳೆದರೂ ಈವರೆಗೆ ಬೋರ್ ಆನ್ ಮಾಡಿ ಜನರಿಗೆ ಹನಿ ನೀರು ಕೊಟ್ಟಿಲ್ಲ! ಇದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಠಗೋಡು ಗ್ರಾಮದ ಬ್ರಾಹ್ಮಣರ ಕೇರಿಯಲ್ಲಿ ಕಂಡುಬಂದಿರುವ ಆಡಳಿತ ವ್ಯವಸ್ಥೆಯ ಅಣಕು.
ಸಿದ್ಧವಿದ್ದರೂ ಆನ್ ಆಗದ ಮೋಟಾರ್: ಅಧಿಕಾರಿಗಳ ಧೋರಣೆಗೆ ಆಕ್ರೋಶ
ಕುಂಠಗೋಡು ಗ್ರಾಮದ ಬ್ರಾಹ್ಮಣರ ಕೇರಿಯಲ್ಲಿ ಕುಡಿಯುವ ನೀರಿನ ತತ್ವಾರ ನೀಗಿಸಲು ಎರಡು ವರ್ಷಗಳ ಹಿಂದೆಯೇ ಬೋರ್‌ವೆಲ್ ಕೊರೆಯಲಾಗಿತ್ತು. ಮೋಟಾರ್ ಹಾಗೂ ಸ್ಟಾರ್ಟರ್‌ಗೆ ಕೇವಲ ಕೇಬಲ್ ವೈರ್ ಜೋಡಿಸಿ ಸ್ವಿಚ್ ಆನ್ ಮಾಡಿದರೆ ಇಡೀ ಗ್ರಾಮದ ಜನರ ದಾಹ ತೀರಲಿದೆ. ಆದರೆ, ಈ ಕನಿಷ್ಠ ಕೆಲಸವನ್ನು ಮಾಡಲು ಸ್ಥಳೀಯ ಕಲ್ಮನೆ ಗ್ರಾಮ ಪಂಚಾಯಿತಿಗೆ ಎರಡು ವರ್ಷಗಳಿಂದ ಪುರುಸೊತ್ತೇ ಸಿಕ್ಕಿಲ್ಲ. ಪರಿಣಾಮವಾಗಿ, ಗ್ರಾಮಸ್ಥರು ಪ್ರತಿದಿನ ತಮ್ಮ ಜಮೀನು ಮತ್ತು ತೋಟದ ಬಾವಿಗಳಿಂದ ಹೊತ್ತು ತಂದು ನೀರು ಬಳಸಬೇಕಾದ ದುಸ್ಥಿತಿ ಮುಂದುವರಿದಿದೆ.

ಮೊದಲ ದಿನ ಬಂದ ನೀರು ಮತ್ತೆ ಬರಲೇ ಇಲ್ಲ!
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ 'ಜಲಜೀವನ್ ಮಿಷನ್' ಅಡಿಯಲ್ಲಿ ಗ್ರಾಮದ ಮನೆ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಪೈಪ್ ಲೈನ್ ಜೋಡಿಸಿದ ಆರಂಭದ ಮೊದಲ ದಿನ ನಲ್ಲಿಯಲ್ಲಿ ನೀರು ನೋಡಿ ಸಂಭ್ರಮಿಸಿದ್ದ ಗ್ರಾಮಸ್ಥರಿಗೆ ಆ ಬಳಿಕ ನಿರಾಸೆಯೇ ಗತಿಯಾಗಿದೆ. ಅಂದಿನಿಂದ ಇಂದಿನವರೆಗೂ ನಲ್ಲಿಯಲ್ಲಿ ನೀರು ಹರಿದೇ ಇಲ್ಲ. ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಯೂ ಅತ್ಯಂತ ಕಳಪೆಯಾಗಿದ್ದು, ಇದರ ಬಗ್ಗೆ ತನಿಖೆ ನಡೆಯಬೇಕು ಎಂಬುದು ಗ್ರಾಮಸ್ಥರ ನೇರ ಆರೋಪ.
ಜಿ.ಪಂ ಸಿಇಒ ಖಡಕ್ ಸೂಚನೆಗೂ ಕ್ಯಾರೆ ಎನ್ನದ ಪಂಚಾಯಿತಿ!
ಈ ಬೋರ್‌ವೆಲ್ ಚಾಲನೆ ಮಾಡುವಂತೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಹಿಂದಿನ ಸಿಇಒ ಹೇಮಂತ್ ಅವರ ಗಮನಕ್ಕೂ ಗ್ರಾಮಸ್ಥರು ತಂದಿದ್ದರು. ಅವರು ತಾಲೂಕು ಆಡಳಿತ ಹಾಗೂ ಕಲ್ಮನೆ ಪಂಚಾಯಿತಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸ್ಥಳೀಯ ಆಡಳಿತ ಡೋಂಟ್ ಕೇರ್ ಎಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಲು ಆದೇಶಿಸಿದ್ದರೂ, ಕಲ್ಮನೆ ಪಂಚಾಯಿತಿ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ಬಿಸಿಲಿನ ಬೇಗೆ, ಆವರಿಸಿದ ಬರ: ಬಾವಿಗಳು ಬತ್ತಿದರೆ ಗತಿಯೇನು?
ರಾಜ್ಯದಲ್ಲಿ ಈಗಾಗಲೇ ಬರಗಾಲ ಆವರಿಸಿದ್ದು, ದಿನದಿಂದ ದಿನಕ್ಕೆ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಸದ್ಯಕ್ಕೆ ತೋಟ ಮತ್ತು ಮನೆಯ ಬಾವಿಗಳನ್ನು ಆಶ್ರಯಿಸಿರುವ ಜನರಿಗೆ ಬೇಸಿಗೆ ಕಾಲಿಡುತ್ತಿದ್ದಂತೆ ಬಾವಿ ಜಲಮೂಲಗಳು ಸಂಪೂರ್ಣ ಬತ್ತಿ ಹೋಗುವ ಆತಂಕ ಶುರುವಾಗಿದೆ. ಪರಿಸ್ಥಿತಿ ಹೀಗಿರುವಾಗ, ಸಿದ್ಧವಿರುವ ಬೋರ್ ಆನ್ ಮಾಡದಿದ್ದರೆ ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ಭೀಕರ ಹಾಹಾಕಾರ ಸೃಷ್ಟಿಯಾಗುವುದು ನಿಶ್ಚಿತ.
ಗ್ರಾಮಸ್ಥರ ಆಕ್ರೋಶ ಮತ್ತು ಎಚ್ಚರಿಕೆ
-
ಅರುಣ್ (ಕುಂಠಗೋಡಿನ ಹಿರಿಯಣ್ಣನವರ ಪುತ್ರಿ): ಎರಡು ವರ್ಷಗಳ ಹಿಂದೆ ಜನಪ್ರತಿನಿಧಿಗಳು ನೀರಿನ ಭರವಸೆ ನೀಡಿ ಬೋರ್ ಕೊರೆಸಿದ್ದರು. ಆದರೆ ಈವರೆಗೆ ನೀರು ಕೊಟ್ಟಿಲ್ಲ. ಬರಗಾಲದಲ್ಲಿ ಬಾವಿಗಳು ಬತ್ತಿದರೆ ನಾವು ಎಲ್ಲಿಗೆ ಹೋಗಬೇಕು? ತಾಲೂಕು ಮತ್ತು ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿ ಸಾಕಾಗಿದೆ. ನೀರಿನ ಹಾಹಾಕಾರ ಶುರುವಾಗುವ ಮೊದಲೇ ಬೋರ್ ಚಾಲು ಮಾಡದಿದ್ದರೆ ಗ್ರಾಮಸ್ಥರೆಲ್ಲರೂ ಪಂಚಾಯಿತಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ.

-
ಕೆ.ಬಿ ಗಣಪತಿೌ: ನಲ್ಲಿ ಅಳವಡಿಕೆಯಲ್ಲಿ ಸಂಪೂರ್ಣ ಕಳಪೆ ಕಾಮಗಾರಿ ನಡೆದಿದೆ. ನಲ್ಲಿಯಲ್ಲೂ ನೀರಿಲ್ಲ, ಊರಲ್ಲಿ ಚರಂಡಿಯೂ ಇಲ್ಲ. ರಸ್ತೆಗಳಂತೂ ತೀರಾ ಹಾಳಾಗಿದ್ದು ಓಡಾಡಲು ಸಾಧ್ಯವಿಲ್ಲದಂತಾಗಿದೆ. ಕಳಪೆ ಕಾಮಗಾರಿಯ ತನಿಖೆ ನಡೆಸಿ ಕೂಡಲೇ ಕುಡಿಯುವ ನೀರು ಕಲ್ಪಿಸಬೇಕು.

-
ಮೃತ್ಯುಂಜಯ: ಸುಮಾರು ಎರಡು ವರ್ಷಗಳಿಂದ ಸಮಸ್ಯೆ ಹಾಗೇ ಇದೆ. ಪಂಚಾಯಿತಿ ಪಿಡಿಒಗೆ ಹಲವು ಬಾರಿ ಹೇಳಿದರೂ ನೀರು ಪೂರೈಸುವ ಗೋಜಿಗೆ ಹೋಗಿಲ್ಲ.
-
ಮಂಗಳಗೌರಿ: ಪಕ್ಕದ ಊರುಗಳಲ್ಲಿ, ಸಂಬಂಧಿಕರ ಮನೆಗಳಲ್ಲಿ ನಲ್ಲಿ ತಿರುಗಿಸಿದರೆ ನೀರು ಬರುತ್ತದೆ. ಆದರೆ ನಮ್ಮ ಊರಿನಲ್ಲಿ ಮಾತ್ರ ದಿನ ಬೆಳಗಾದರೆ ನೀರಿನದ್ದೇ ಚಿಂತೆ. ರಸ್ತೆಯೂ ಹಾಳಾಗಿದೆ. ಅಧಿಕಾರಿಗಳು ಮೊದಲು ಕುಡಿಯುವ ನೀರು ಬಿಟ್ಟು, ರಸ್ತೆ ದುರಸ್ತಿ ಮಾಡಲಿ.

ಮಾಜಿ ಅಧ್ಯಕ್ಷರ ಆಗ್ರಹ
ಕಲ್ಮನೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿ, "ನಮ್ಮ ಅಧಿಕಾರದ ಅವಧಿಯಲ್ಲಿ ಕುಂಠಗೋಡು ಗ್ರಾಮದ ಜನರ ಬವಣೆ ತಪ್ಪಿಸಲು ಬೋರ್ ಕೊರೆಸಿ, ಮೋಟಾರ್, ಪಂಪ್ ಸೆಟ್, ಕರೆಂಟ್, ಸ್ಟಾರ್ಟರ್ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಪೂರ್ಣಗೊಳಿಸಲಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಬೋರ್ ಆನ್ ಮಾಡಿಲ್ಲ. ಪಿಡಿಒ ಗಮನಕ್ಕೆ ಪದೇಪದೆ ತಂದರೂ ಇಂದು-ನಾಳೆ ಎಂದು ಕಾಲಹರಣ ಮಾಡುತ್ತಿದ್ದಾರೆ. ಬರಗಾಲದ ನಡುವೆ ಜನ ನೀರಿಲ್ಲದೆ ಬೀದಿಗೆ ಇಳಿಯುವ ಮುನ್ನ ತಕ್ಷಣವೇ ಬೋರ್ ಚಾಲು ಮಾಡಬೇಕು," ಎಂದು ಆಗ್ರಹಿಸಿದ್ದಾರೆ.

ಹೊಡೆದು ಹೋದ ನೀರಿನ ಪೈಪ್, ರಸ್ತೆ ಪಾಲಾಗುತ್ತಿರುವ ನೀರು
ಸಾಗರದ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಂಠಗೋಡಿನ ನೀರಿನ ಕತೆ ಒಂದೆಡೆಯಾದರೇ ಇದೇ ಕಬ್ಬಿನಮನೆ, ಸನ್ಯಾಸಿ ಜಡ್ಡು, ಬ್ರಾಹ್ಮಣ ಬೇದೂರು, ಸಂಪಿಗೆಮನೆ ಸೇರಿದಂತೆ ಹಲವೆಡೆ ನೀರು ಬಂದರು ಅಲ್ಲಲ್ಲಿ ಪೈಪ್ ಹೊಡೆದು ಅರ್ಧ ನೀರು ರಸ್ತೆ ಪಾಲು ಆಗುತ್ತಿದೆ. ಮತ್ತೆ ಅರ್ಧದಷ್ಟು ನೀರು ಮನೆಗಳಿಗೆ ಸರಬರಾಜು ಆಗುತ್ತಿರುವುದರಿಂದ ಕುಡಿಯೋ ನೀರಿಗೆ ಆಹಾಹಾಕಾರ ಎದ್ದಿದೆ.
ಅದರಲ್ಲೂ ಸನ್ಯಾಸಿ ಜಡ್ಡು ಗ್ರಾಮದಲ್ಲಿ ಎರಡು ಮನೆಗೆ ನೀರಿನ ಸಂಪರ್ಕವನ್ನೇ ನೀಡಿಲ್ಲ. ಜೊತೆಗೆ ಇಕ್ಕೇರಿ ಹರಳಿಕೊಪ್ಪದ 15ಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಪೈಪ್ ಲೈನ್ ಮಾಡಿಲ್ಲ. ಸಂಪಿಗೆ ಮನೆ ವ್ಯಾಪ್ತಿಯಲ್ಲಿ ತಗ್ಗು ಗುಡ್ಡದ ನಡುವೆ ನೀರು ತಗ್ಗಿನ ಭಾಗಕ್ಕೆ ಹರಿದು ಹೋದ್ರೆ, ಎತ್ತರದ ಭಾಗದ ಮನೆಗಳಿಗೆ ನೀರು ಹರಿಯದೇ ಜನರು ಸಮಸ್ಯೆಗೆ ಸಿಲುಕಿದ್ದಾರೆ.

ಪಿಡಿಓ ನೋಡಿಯೇ ಇಲ್ಲವೆಂದ ಮಹಿಳೆ
ಸಂಪಿಗೆ ಮನೆಯ ಸುಜಾತ ಎಂಬುವರ ಮಾತನಾಡಿ ಪಿಡಿಓ, ಸೆಕ್ರೆಟರಿ ಯಾರು ಎನ್ನುವುದನ್ನೇ ನೋಡಿಲ್ಲ. ನಮ್ಮ ಮನೆಗೆ ನೀರಿನ ಸಂಪರ್ಕ ಕಲ್ಪಿಸುವಂತ ಪೈಪ್ ಹೊಡೆದು ತಿಂಗಳುಗಳೇ ಕಳೆದಿವೆ. ಅವುಗಳನ್ನು ಸರಿಪಡಿಸೇ ಇಲ್ಲ. ನೀರು ಗಂಟಿಗೆ ಹೇಳಿ ಹೇಳಿ ಸಾಕಾಗಿದೆ. ಎತ್ತರದಲ್ಲಿರುವಂತ ನಮ್ಮ ಮನೆಗೆ ನೀರು ಸಣ್ಣದಾಗಿ ಬರುತ್ತಿದೆ. ಅದನ್ನು ಸರಿಪಡಿಸೋ ಕೆಲಸ ಮಾಡಿಲ್ಲ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಮ್ಮ ಮನೆಗೆ ನೀರು ಸಂಪರ್ಕದ ನಲ್ಲಿ ಹಾಕಿದ್ದಾರೆ. ಆದರೇ ನೀರು ಬರಲ್ಲ. ಅಲ್ಲಲ್ಲಿ ಪೈ ಹೊಡೆದು ಹೋಗಿದ್ದಾವೆ. ಸರಿ ಮಾಡಿಲ್ಲ. ಜಾನುವಾರು, ಮನೆಗೆ ನೀರು ಹೋರುವಂತ ಪರಿಸ್ಥಿತಿ ನಮ್ಮದಾಗಿದೆ. ನಮ್ಮ ಹೊಲದ ಕೆಳಭಾಗದಲ್ಲಿರುವಂತ ಬಾವಿಯಿಂದ ನೀರು ತಂದು ಜೀವನ ನಡೆಸಲಾಗುತ್ತಿದೆ. ಈ ಬೇಸಿಗೆಯಲ್ಲಿ ಕುಡಿಯೋದಕ್ಕೆ ನೀರು ಸಿಗುವುದೇ ಕಷ್ಟವೇನೋ ಎನ್ನುವಂತೆ ಆಗಿದೆ ಅಂತಾರೆ ಕಬ್ಬಿನಗದ್ದೆಯ ಪಾರ್ವತಿ ಹಾಗೂ ಮಂಜುನಾಥ್.

ಕಲ್ಮನೆ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನೀರಿಗಾಗಿ ಆಹಾಹಾಕಾರವೆಂದ ಗ್ಯಾರಂಟಿ ಸಮಿತಿ ಸದಸ್ಯ
ಸಾಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ನಾಗರಾಜ್ ಕಲ್ಮನೆ ಅವರು ನೀರು ಗಂಟಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವುದೇ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಗೆ ಕಾರಣ. ಸಮಸ್ಯೆ ಸರಿಪಡಿಸಬೇಕಿದ್ದಂತ ಪಿಡಿಓ ಆ ಗೋಜಿಗೆ ಹೋಗುತ್ತಿಲ್ಲ. ಕಲ್ಮನೆ ಗ್ರಾಮ ಪಂಚಾಯ್ತಿಗೆ ಆಡಳಿತಾಧಿಕಾರಿಯಾಗಿ ಹನೀಫ್ ಎಂಬುವರು ಬಂದ ಮೇಲೆ ಕೆಲಸ ಸಮಸ್ಯೆ ನಿವಾರಿಸುವಂತ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಬಹುಗ್ರಾಮ ನೀರಿನ ಟ್ಯಾಂಕರ್, ಮಿನಿ ಸ್ಟೋರೇಜ್ ಸೇರಿದಂತೆ ಇತರೆ ಸಾರ್ವನಿಕ ಕೆಲಸವನ್ನು ಮಾಡಿದ್ದಾರೆ. ಸರ್ಕಾರಿ ಮಾಹಿತಿಯನ್ನು ಜನರಿಗೆ ತಲುಪಿಸಬೇಕಾಗಿದ್ದಂತ ಪಿಡಿಓ ಆ ಕೆಲಸವನ್ನೇ ಮಾಡುತ್ತಿಲ್ಲ ಎಂಬುದಾಗಿ ಆರೋಪಿಸಿದರು.

ಸಮಸ್ಯೆ ಸರಿಪಡಿಸುವುದಾಗಿ ಹೇಳಿಗ ಸಾಗರ ಇಓ
ಈ ಬಗ್ಗೆ ಸಾಗರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮೌನೇಶ್ ಬಿ ಬಡಿಗೇರ್ ಅವರನ್ನು ಪ್ರಶ್ನಿಸಿದಾಗ, ಕಲ್ಮನೆ ಗ್ರಾಮ ಪಂಚಾಯ್ತಿ ಪಿಡಿಒ ಅವರ ಗಮನಕ್ಕೆ ತರಲಾಗುತ್ತದೆ. ನಾನು ಕೂಡ ಕಬ್ಬಿನ ಮನೆ, ಸಂಪಿಗೆಮನೆ, ಬ್ರಾಹ್ಮಣ ಬೇಸೂರು, ಕುಂಠಗೋಡು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದ್ದಾರೆ.
ಒಟ್ಟಾರೆಯಾಗಿ ಮೂಲಸೌಕರ್ಯಗಳೆಲ್ಲವೂ ಕಣ್ಣೆದುರೇ ಸಿದ್ಧವಿದ್ದರೂ, ಕೇವಲ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕುಂಠಗೋಡಿನ ಜನ ಹನಿ ನೀರಿಗಾಗಿ ಪರಿತಪಿಸುತ್ತಿರುವುದು ಆಡಳಿತ ವೈಫಲ್ಯದ ಪರಮಾವಧಿ. ಇನ್ನಾದರೂ ಸಾಗರ ತಾಲೂಕು ಆಡಳಿತ ಹಾಗೂ ಕಲ್ಮನೆ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡು, ತಕ್ಷಣವೇ ಮೋಟಾರ್ ಆನ್ ಮಾಡಿ ಬ್ರಾಹ್ಮಣರ ಕೇರಿಯ ನೀರಿನ ದಾಹ ತಣಿಸಲಿ. ಕಬ್ಬಿನಮನೆ, ಸಂಪಿಗೆಮನೆ, ಬ್ರಾಹ್ಮಣ ಬೇಸೂರು ಗ್ರಾಮದ ಅಲ್ಲಲ್ಲಿ ಹೊಡೆದಿರುವಂತ ಕುಡಿಯೋ ನೀರಿನ ಪೈಪ್ ಸರಿ ಪಡಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.
ವಿಶೇಷ ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..