ರಾಯ್‌ಪುರ್: ಮಾದಕ ವಸ್ತು ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ನಾಲ್ವರು ವಿಚಾರಣಾಧೀನ ಕೈದಿಗಳು ಛತ್ತೀಸ್‌ಗಢದ ಮಹಾಸಮುಂದ್ ಜಿಲ್ಲಾ ಕಾರಾಗೃಹದ ಕಾಂಪೌಂಡ್ ಹಾರಿ ಪರಾರಿಯಾಗಿರುವ ಘಟನೆ ನಡೆದಿದೆ.
ಪಂಚುರಾಮ್ ನಿಶಾದ್, ರಾಜೇಂದ್ರ ರಾಜ್ ಚೌಧರಿ, ಧರ್ಮವೀರ್ ಯೋಗಿ ಮತ್ತು ಲೀಲಾಧರ್ ಪಾಲ್ ಪರಾರಿಯಾಗಿರುವ ವಿಚಾರಣಾಧೀನ ಕೈದಿಗಳು. ನಾಲ್ವರಲ್ಲಿ ಮೂವರು ಮಾದಕ ವಸ್ತು ಸಂಬಂಧಿತ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. ಇನ್ನೊಬ್ಬ ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎನ್ನಲಾಗಿದೆ.
ಇವರನ್ನು ಜೈಲಿನ ಬ್ಯಾರಕ್ ಸಂಖ್ಯೆ 5 ರಲ್ಲಿ ಇರಿಸಲಾಗಿತ್ತು. ಸೋಮವಾರ (ನ.16) ಬೆಳಗಿನ ಜಾವ 3 ರಿಂದ 4 ಗಂಟೆಯ ಅವಧಿಯಲ್ಲಿ ಜೈಲಿನ ಗೋಡೆ ಜಿಗಿದು ಪರಾರಿಯಾಗಿದ್ದಾರೆ ಎಂದು ಜೈಲು ಸೂಪರಿಂಟೆಂಡೆಂಟ್ ಸಂದೀಪ್ ಕುಮಾರ್ ತಿಳಿಸಿದ್ದಾರೆ.
ಜೈಲು ಅಧಿಕಾರಿಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಾರಿಯಾಗಿರುವವರನ್ನು ಪತ್ತೆಹಚ್ಚಲು ಶೋಧ ಕಾರ್ಯ ಆರಂಭಿಸಿದ್ದಾರೆ. ಜಿಲ್ಲೆಯಾದ್ಯಂತ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಪರಾರಿಯಾಗಿರುವವರನ್ನು ಪತ್ತೆಹಚ್ಚಲು ವಿವಿಧ ಸ್ಥಳಗಳಲ್ಲಿ ಚೆಕ್-ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಅವರನ್ನು ಪತ್ತೆಹಚ್ಚಲು ವಿವಿಧ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಜೈಲಿನ ಭದ್ರತೆಯನ್ನು ದಾಟಿ ಕಾಂಪೌಂಡ್ ತನಕ ಇವರೆಲ್ಲ ಹೇಗೆ ತಲುಪಿದರು ಎಂದು ತಿಳಿದುಕೊಳ್ಳಲು ಜೈಲಿನ ಒಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಮೇ 2021 ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದ ಐವರು ಕೈದಿಗಳು ಇದೇ ಜೈಲಿನಿಂದ ಇದೇ ರೀತಿ ತಪ್ಪಿಸಿಕೊಂಡು ಪರರೈಯಾಗಿದ್ದರು. ಇದೀಗ ಮತ್ತೆ ಕೈದಿಗಳು ಎಸ್ಕೇಪ್ ಆಗಿರುವುದು ಜೈಲಿನ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನಿಸುವಂತೆ ಮಾಡಿದೆ.