ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ನಾಯಕ ಎಂಎಸ್ ಧೋನಿ ಅವರು ಐಪಿಎಲ್ ಆಟಗಾರನ ವೃತ್ತಿಜೀವನಕ್ಕೆ ವಿದಾಯ ಹೇಳಿ, 2027ರ ಆವೃತ್ತಿಗೆ ತಂಡದ ಮೆಂಟರ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕ್ಯಾಪ್ಟನ್ ಕೂಲ್ ಅವರ ಈ ಐತಿಹಾಸಿಕ ಪಯಣದ ಅಂತ್ಯಕ್ಕೆ ಸಿಎಸ್‌ಕೆ ತಂಡದ ಅಪ್ಪಟ ಅಭಿಮಾನಿಯಾಗಿರುವ ತಮಿಳು ಸ್ಟಾರ್ ನಟ ಹಾಗೂ ನಿರ್ಮಾಪಕ ಧನುಷ್ ಅತ್ಯಂತ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಧನುಷ್, “ಕೆಲವು ಆಟಗಾರರು ನಮಗೆ ಮನರಂಜನೆ ನೀಡುತ್ತಾರೆ. ಇನ್ನು ಕೆಲವರು ನಮ್ಮ ಜೀವನದ ಒಂದು ಭಾಗವಾಗುತ್ತಾರೆ. ಎಂಎಸ್ ಧೋನಿ ಈ ಎರಡೂ ಆಗಿದ್ದಾರೆ” ಎಂದು ಕೊಂಡಾಡಿದ್ದಾರೆ.
ಮುಂದುವರಿದು ಬರೆದಿರುವ ಅವರು, “ಎಲ್ಲಾ ಸುಂದರ ನೆನಪುಗಳಿಗೆ ಧನ್ಯವಾದಗಳು. ನೀವಿಲ್ಲದೆ ಆಟ ಮೊದಲಿನಂತಿರುವುದಿಲ್ಲ, ಆದರೆ ಮೈದಾನದ ಹೊರಗೆ (ಸೈಡ್‌ಲೈನ್ಸ್‌ನಲ್ಲಿ) ನಿಮ್ಮನ್ನು ನೋಡಲು ನಾನು ಕಾಯುತ್ತಿರುತ್ತೇನೆ. ನಿಮ್ಮ ಸಲಹೆ ಮತ್ತು ಜ್ಞಾನದಿಂದ ಸಾವಿರಾರು ಯುವ ಆಟಗಾರರು ಪ್ರಯೋಜನ ಪಡೆದಿದ್ದಾರೆ. ಮುಂಬರುವ ಪೀಳಿಗೆಗೂ ಇದು ಸ್ಫೂರ್ತಿ ಮತ್ತು ಕಿಚ್ಚು ಹಚ್ಚಲಿ ಎಂದು ಆಶಿಸುತ್ತೇನೆ. ವಿದಾಯ ಚಾಂಪಿಯನ್” ಎಂದು ಕೈಜೋಡಿಸಿ ನಮಸ್ಕರಿಸುವ ಎಮೋಜಿಯೊಂದಿಗೆ ಗೌರವ ಸಲ್ಲಿಸಿದ್ದಾರೆ.
ಧನುಷ್ ಅವರ ಕುಟುಂಬಕ್ಕೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೂ ಆತ್ಮೀಯ ನಂಟಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಧನುಷ್ ಅವರ ಅತ್ತಿಗೆ ಹಾಗೂ ನಿರ್ದೇಶಕಿ ಗೀತಾಂಜಲಿ ಸೆಲ್ವರಾಘವನ್ ಅವರ ತಂದೆ, ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಪಿ.ಎಸ್. ರಾಮನ್ ಬರೆದ ‘ಲಿಯೋ: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಚೆನ್ನೈ ಸೂಪರ್ ಕಿಂಗ್ಸ್’ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಎಂಎಸ್ ಧೋನಿ ಮತ್ತು ಸಿಎಸ್‌ಕೆ ತಂಡದ ಆಟಗಾರರು ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು. ಆ ಸಂದರ್ಭದಲ್ಲಿ ಗೀತಾಂಜಲಿ ಅವರು ಧೋನಿ, ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್, ಅನಿರುದ್ಧ್ ರವಿಚಂದರ್, ಆರ್. ಅಶ್ವಿನ್ ಹಾಗೂ ಕೃಷ್ಣಮಾಚಾರಿ ಶ್ರೀಕಾಂತ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದರು.