ನವದೆಹಲಿ- ರಕ್ತಸಂಬಂಧ ಹೊಂದಿರುವವರ ನಡುವಿನ ವಿವಾಹಗಳ (Consanguineous Marriages) ಪದ್ಧತಿಯನ್ನು ನಿಯಂತ್ರಿಸಲು ಸೂಕ್ತ ಕಾನೂನು ರೂಪಿಸುವ ಸಾಧ್ಯತೆ ಕುರಿತು ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಶುಕ್ರವಾರ ಈ ಸಂಬಂಧ ಅರ್ಜಿಯ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ, ರಕ್ತಸಂಬಂಧಿಗಳ ನಡುವಿನ ವಿವಾಹಗಳನ್ನು ನಿಯಂತ್ರಿಸುವುದು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಇದು ಸಂಪೂರ್ಣವಾಗಿ ಶಾಸಕಾಂಗದ ಅಧಿಕಾರಕ್ಕೆ ಒಳಪಟ್ಟ ವಿಚಾರ ಎಂದು ಪೀಠ ಅಭಿಪ್ರಾಯಪಟ್ಟಿತು.
ಅಲ್ಲದೆ, ಈ ಕುರಿತು ಸರ್ಕಾರಕ್ಕೆ ನೇರವಾಗಿ ನಿರ್ದೇಶನ ನೀಡುವ ಉದ್ದೇಶ ನ್ಯಾಯಾಲಯಕ್ಕಿಲ್ಲ. ಬದಲಾಗಿ, ಸೂಕ್ತ ಕಾನೂನು ರೂಪಿಸುವ ಅಗತ್ಯದ ಬಗ್ಗೆ ಕೇಂದ್ರ ಸರ್ಕಾರದಲ್ಲಿ ಅರಿವು ಮೂಡಿಸುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ರಕ್ತಸಂಬಂಧಿಗಳ ನಡುವಿನ ವಿವಾಹ ಪದ್ಧತಿಯಿಂದ ಮುಂದಿನ ಪೀಳಿಗೆಯ ಆರೋಗ್ಯ ಮತ್ತು ಸಮಾನತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಗಮನ ಸೆಳೆದರು. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಶಾಲಾ-ಕಾಲೇಜುಗಳ ಪಠ್ಯಕ್ರಮ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಇಂತಹ ವಿವಾಹಗಳ ದುಷ್ಪರಿಣಾಮಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸೂಕ್ತ ಶಾಸನ ರೂಪಿಸುವ ಅಗತ್ಯವನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡುವುದಾಗಿ ತಿಳಿಸಿತು.
“ಸೂಕ್ತ ಕಾನೂನು ರೂಪಿಸುವ ಅಗತ್ಯವನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರವನ್ನು ಪ್ರೇರೇಪಿಸುವ ಸೀಮಿತ ಉದ್ದೇಶದಿಂದ ನಾವು ನೋಟಿಸ್ ನೀಡುತ್ತಿದ್ದೇವೆ. ಸರ್ಕಾರಕ್ಕೆ ನಿರ್ದೇಶನ ನೀಡುವುದಿಲ್ಲ, ಬದಲಾಗಿ ಈ ವಿಚಾರದಲ್ಲಿ ಸಂವೇದನೆ ಮೂಡಿಸಲು ಬಯಸುತ್ತೇವೆ” ಎಂದು ಪೀಠ ಹೇಳಿತು.
ರಕ್ತಸಂಬಂಧಿಗಳ ನಡುವಿನ ವಿವಾಹ ಪದ್ಧತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಸುರಕ್ಷತಾ ಕ್ರಮಗಳು ಮತ್ತು ಕಾನೂನು ನಿಯಂತ್ರಣ ಅಗತ್ಯವಿದೆ ಎಂಬುದು ಅರ್ಜಿದಾರರ ಪ್ರಮುಖ ವಾದವಾಗಿದೆ.
ಈ ಮೂಲಕ ರಕ್ತಸಂಬಂಧಿಗಳ ನಡುವಿನ ವಿವಾಹಗಳ ಕುರಿತು ಕಾನೂನು ರೂಪಿಸುವ ಸಾಧ್ಯತೆಯ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಏನು ಎಂಬುದು ಮುಂದಿನ ಹಂತದಲ್ಲಿ ಸ್ಪಷ್ಟವಾಗುವ ನಿರೀಕ್ಷೆಯಿದೆ.