ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Indira Gandhi International Airport) ಸುತ್ತ 60 ದಿನಗಳ ಕಾಲ ಡ್ರೋನ್ ಹಾರಾಟ ನಿಷೇಧಿಸಲಾಗಿದೆ.
ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮಹತ್ವದ ಭದ್ರತಾ ಕ್ರಮಕೈಗೊಂಡಿದ್ದಾರೆ. ಡ್ರೋನ್‌ಗಳ ಜೊತೆಗೆ ಪ್ಯಾರಾಗ್ಲೈಡರ್, ಹ್ಯಾಂಗ್‌ಗ್ಲೈಡರ್ ಹಾಗೂ ಇತರೆ ಮಾನವರಹಿತ ವಿಮಾನಗಳ ಹಾರಾಟಕ್ಕೂ ನಿಷೇಧ ಹೇರಲಾಗಿದೆ.
ಪೈಲಟ್‌ಗಳ ಸುರಕ್ಷತೆ ಹಿನ್ನೆಲೆಯಲ್ಲಿ ನವೆಂಬರ್ 18 ರಿಂದಲೇ ನಿಷೇಧಾಜ್ಞೆ ಜಾರಿಗೆ ಬರಲಿದೆ. 60 ದಿನಗಳ ಕಾಲ, ಅಂದರೆ 2027ರ ಜನವರಿ 16ರವರೆಗೆ ಡ್ರೋನ್ ಹಾರಾಟ ನಿರ್ಬಂಧ ಜಾರಿಯಲ್ಲಿರಲಿದೆ.
ವಿಮಾನಗಳು ಲ್ಯಾಂಡಿಂಗ್ ಆಗುವ ಸಮಯದಲ್ಲಿ ಪೈಲಟ್‌ಗಳ ದೃಷ್ಟಿಗೆ ಅಡಚಣೆಯಾಗುತ್ತಿರುವ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲ್ (ATC) ವರದಿ ಮಾಡಿರುವುದರಿಂದ, ಇದೇ ಅವಧಿಯಲ್ಲಿ ಸುತ್ತಮುತ್ತಲಿನ ಫಾರ್ಮ್‌ಹೌಸ್‌ಗಳು, ಬ್ಯಾಂಕ್ವೆಟ್ ಹಾಲ್‌ಗಳು, ಹೋಟೆಲ್‌ಗಳು ಮತ್ತು ಸಮಾರಂಭಗಳಲ್ಲಿ ಲೇಸರ್ ಲೈಟ್ (Laser beams) ಬಳಸುವುದನ್ನು ಸಹ ವರದಿಯ ಪ್ರಕಾರ ಪ್ರತ್ಯೇಕ ಆದೇಶದ ಮೂಲಕ ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ.
ನಿಷೇಧಾಜ್ಞೆಯನ್ನು ಉಲ್ಲಂಘಿಸುವ ವ್ಯಕ್ತಿಗಳು ಅಥವಾ ಕಾರ್ಯಕ್ರಮ ಆಯೋಜಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 223 ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆದೇಶದಲ್ಲಿ ಎಚ್ಚರಿಸಲಾಗಿದೆ.
ಮಾನವರಹಿತ ವಿಮಾನ ವ್ಯವಸ್ಥೆ ಬಳಸಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ವಿಶ್ವಾಸಾರ್ಹ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇಂತಹ ಸಾಧನಗಳ ಹಾರಾಟದಿಂದ ವಿಮಾನಯಾನ ಸುರಕ್ಷತೆಗೆ ಗಂಭೀರ ಅಪಾಯ ಎದುರಾಗುವ ಸಾಧ್ಯತೆಯಿದೆ. ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿಗಳ ಜೊತೆಗೆ ಜನರ ಜೀವ ರಕ್ಷಣೆಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 163ರ ಅಡಿಯಲ್ಲಿ ಆದೇಶ ಜಾರಿಗೊಳಿಸಲಾಗಿದೆ. ನಿಷೇಧ ಉಲ್ಲಂಘಿಸುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 223ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸಿಪಿ ಪ್ರದೀಪ್ ಕುಮಾರ್ ಮೀನಾ ತಿಳಿಸಿದ್ದಾರೆ.