ಮುಂಬೈ: ಬಾಲಿವುಡ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಸಾಂಪ್ರದಾಯಿಕ ಉಡುಗೆಯ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಅಸ್ಸಾಂನ ಪಾರಂಪರಿಕ ಉಡುಪಾದ ಮೇಖಲಾ ಚಾದರ್ ಧರಿಸಿರುವ ವಿಡಿಯೋವನ್ನು ಅವರು ಶುಕ್ರವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕ್ರೀಮ್ ಮತ್ತು ಕೆಂಪು ಬಣ್ಣದ ಅಸ್ಸಾಂ ರೇಷ್ಮೆಯ ಮೇಖಲಾ ಚಾದರ್ ಉಡುಗೆಯಲ್ಲಿ ರಕುಲ್ ಅತ್ಯಂತ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಉಡುಪಿಗೆ ಒಪ್ಪುವಂತೆ ಎರಡು ಎಳೆಯ ಚಿನ್ನದ ಬಣ್ಣದ ನೆಕ್ಲೇಸ್, ಕಿವಿಯೋಲೆ, ಬಳೆ ಹಾಗೂ ಉಂಗುರವನ್ನು ಧರಿಸಿ ತಮ್ಮ ಸಾಂಪ್ರದಾಯಿಕ ನೋಟಕ್ಕೆ ಮೆರುಗು ನೀಡಿದ್ದಾರೆ. ಅಸ್ಸಾಂನ ಚಿನ್ನದ ಎಳೆಗಳಿಂದ ನೇಯ್ದ ಈ ಸುಂದರ ಉಡುಪನ್ನು ಹಬ್ಬದ ಸಂಜೆಗಾಗಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಮೇಖಲಾ ಚಾದರ್ ಅಸ್ಸಾಂ ಮಹಿಳೆಯರ ಸಾಂಪ್ರದಾಯಿಕ ಉಡುಗೆಯಾಗಿದ್ದು, ಸಾಮಾನ್ಯ ಸೀರೆಗಿಂತ ಭಿನ್ನವಾಗಿ ಎರಡು ಪ್ರತ್ಯೇಕ ಭಾಗಗಳನ್ನು ಹೊಂದಿರುತ್ತದೆ. ಸೊಂಟದ ಕೆಳಭಾಗಕ್ಕೆ ಲಂಗದಂತೆ ನೆರಿಗೆ ಹಾಕಿ ಉಡುವ ಬಟ್ಟೆಯನ್ನು ಮೇಖಲಾ ಎಂದು ಕರೆಯಲಾಗುತ್ತದೆ. ಮೇಲ್ಭಾಗದಲ್ಲಿ ದೇಹ ಮತ್ತು ಭುಜದ ಮೇಲೆ ಸುತ್ತಿಕೊಳ್ಳುವ ಬಟ್ಟೆಯನ್ನು ಚಾದರ್ ಎನ್ನಲಾಗುತ್ತದೆ.
ಅಸ್ಸಾಂನ ಶ್ರೀಮಂತ ನೇಕಾರಿಕೆ ಪರಂಪರೆಗೆ ಈ ಉಡುಪು ಹಿಡಿದ ಕನ್ನಡಿಯಾಗಿದೆ. ಇದನ್ನು ಮುಖ್ಯವಾಗಿ ಮುಗಾ, ಎರಿ ಮತ್ತು ಪಾಟ್ ರೇಷ್ಮೆ ನೂಲುಗಳಿಂದ ತಯಾರಿಸಲಾಗುತ್ತದೆ. ಅದರಲ್ಲೂ ಮುಗಾ ರೇಷ್ಮೆಯು ತನ್ನ ನೈಸರ್ಗಿಕ ಚಿನ್ನದ ಹೊಳಪು ಮತ್ತು ಬಾಳಿಕೆಗೆ ಹೆಸರುವಾಸಿಯಾಗಿದೆ. ಪ್ರಕೃತಿ, ಹೂವು, ಪ್ರಾಣಿಗಳು ಹಾಗೂ ಅಸ್ಸಾಂ ಸಂಸ್ಕೃತಿಯನ್ನು ಬಿಂಬಿಸುವ ಸೂಕ್ಷ್ಮ ಕಸೂತಿ ವಿನ್ಯಾಸಗಳು ಈ ವಸ್ತ್ರದ ಸೊಬಗನ್ನು ಹೆಚ್ಚಿಸುತ್ತವೆ. ಬಿಹು ಹಬ್ಬ, ಮದುವೆ ಹಾಗೂ ಶುಭ ಸಮಾರಂಭಗಳಲ್ಲಿ ಅಸ್ಸಾಂ ಮಹಿಳೆಯರು ಈ ಉಡುಪನ್ನು ಹೆಚ್ಚಾಗಿ ಧರಿಸುತ್ತಾರೆ.