LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ಆಧಾರ್ ಕಾರ್ಡ್’ ಜನ್ಮ ದಿನಾಂಕಕ್ಕೆ ಅಧಿಕೃತ ಸಾಕ್ಷ್ಯವಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸ ಮಾಡುವುದು ಕಷ್ಟ ಎನ್ನುವಂತಾಗಿದೆ. ಬ್ಯಾಂಕ್ ವ್ಯವಹಾರಗಳಿಂದ ಹಿಡಿದು ಸರ್ಕಾರಿ ಯೋಜನೆಗಳು, ಉದ್ಯೋಗ ಸೇರಿದಂತೆ ಹಲವು ಕಡೆ ಆಧಾರ್ ಪ್ರಮುಖ ದಾಖಲೆಯಾಗಿದೆ. ಆದರೆ ಆಧಾರ್ ಕಾರ್ಡ್‌ನಲ್ಲಿರುವ ಜನ್ಮ ದಿನಾಂಕವೇ ಎಲ್ಲ ಸಂದರ್ಭಗಳಲ್ಲೂ ಅಂತಿಮ ದಾಖಲೆ ಆಗುವುದಿಲ್ಲ. ವ್ಯಕ್ತಿಯ ಜನ್ಮ ದಿನಾಂಕ ಸಾಬೀತುಪಡಿಸಲು ಆಧಾರ್‌ನ್ನೇ ಅಧಿಕೃತ ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ವ್ಯಕ್ತಿಯ ಜನ್ಮ ದಿನಾಂಕವನ್ನು ದೃಢೀಕರಿಸಲು ಆಧಾರ್ ಕಾರ್ಡ್‌ನ್ನು ಅಂತಿಮ ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆಧಾರ್ ಕಾಯ್ದೆಯ ಪ್ರಕಾರ, ಆಧಾರ್ ಸಂಖ್ಯೆ ವ್ಯಕ್ತಿಯ ಗುರುತನ್ನು ದೃಢೀಕರಿಸುವ ದಾಖಲೆಯೇ ಹೊರತು ಜನನ ಪ್ರಮಾಣಪತ್ರವಲ್ಲ ಎಂದು ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರ ನ್ಯಾಯಪೀಠ ತಿಳಿಸಿದೆ.

ಅಸಲಿಗೆ ಪ್ರಕರಣ ಏನು?

‘ಜೆಜೆ ಎಲೆಕ್ಟ್ರಾನಿಕ್ಸ್’ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯ ವಯಸ್ಸಿನ ವಿಚಾರದಲ್ಲಿ ವಿವಾದ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ 2017ರಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಆಕೆಯನ್ನು ಕೆಲಸದಿಂದ ತೆಗೆದುಹಾಕಿತ್ತು.

ಮಹಿಳೆಯ ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ಮೇ 20, 1959 ಎಂದು ದಾಖಲಾಗಿತ್ತು. ಈ ದಿನಾಂಕದ ಪ್ರಕಾರ ಆಕೆಗೆ 58 ವರ್ಷಗಳ ನಿವೃತ್ತಿ ವಯಸ್ಸು ಪೂರ್ಣಗೊಂಡಿದೆ ಎಂದು ಸಂಸ್ಥೆ ವಾದಿಸಿತ್ತು.

ಆದರೆ ತನ್ನ ಆಧಾರ್ ಕಾರ್ಡ್‌ನಲ್ಲಿರುವ ಜನ್ಮ ದಿನಾಂಕ ತಪ್ಪಾಗಿದೆ ಎಂದು ಮಹಿಳೆ ಹೇಳಿದ್ದರು. ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ESIC) ದಾಖಲೆಗಳ ಪ್ರಕಾರ, ತನ್ನ ಜನ್ಮ ದಿನಾಂಕ ಮೇ 20, 1960 ಎಂದು ಅವರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ಕಾರ್ಮಿಕ ನ್ಯಾಯಾಲಯ ಮಹಿಳೆಯ ಪರ ತೀರ್ಪು ನೀಡಿದ್ದು, ಆಕೆಯನ್ನು ಕೆಲಸದಿಂದ ತೆಗೆದುಹಾಕಿರುವ ಕ್ರಮ ಕಾನೂನುಬಾಹಿರ ಎಂದು ಘೋಷಿಸಿತ್ತು.

ದೆಹಲಿ ಹೈಕೋರ್ಟ್‌ನಲ್ಲಿ ಸಂಸ್ಥೆಯ ಅರ್ಜಿ

ಕಾರ್ಮಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜೆಜೆ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಆಡಳಿತ ಮಂಡಳಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರು ಸಂಸ್ಥೆಯ ವಾದಗಳನ್ನು ತಳ್ಳಿಹಾಕಿದರು. 2018ರಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹೊರಡಿಸಿದ್ದ ಕಚೇರಿ ಜ್ಞಾಪನಾ ಪತ್ರವನ್ನು ನ್ಯಾಯಾಲಯ ಉಲ್ಲೇಖಿಸಿತು.

ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕವನ್ನು ಕಾರ್ಡುದಾರರು ಸಲ್ಲಿಸುವ ದಾಖಲೆಗಳು ಅಥವಾ ಸ್ವಯಂ ಘೋಷಣೆಯ ಆಧಾರದ ಮೇಲೆ ದಾಖಲಿಸಲಾಗುತ್ತದೆ ಎಂಬ ಯುಐಡಿಎಐ ಸ್ಪಷ್ಟನೆಯನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು.

ಆಧಾರ್ ಜನ್ಮ ದಿನಾಂಕಕ್ಕೆ ಅಂತಿಮ ದಾಖಲೆ ಅಲ್ಲ

ಆಧಾರ್‌ನಲ್ಲಿರುವ ಜನ್ಮ ದಿನಾಂಕವನ್ನು ಅಂತಿಮ ಸಾಕ್ಷ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಇಎಸ್‌ಐಸಿ ದಾಖಲೆಗಳ ಪ್ರಕಾರ ಮಹಿಳೆಯ ಜನ್ಮ ದಿನಾಂಕ 1960 ಎಂದು ದೃಢಪಟ್ಟ ಹಿನ್ನೆಲೆಯಲ್ಲಿ, 2017ರಲ್ಲಿ ಆಕೆಗೆ ನಿವೃತ್ತಿ ವಯಸ್ಸು ಪೂರ್ಣಗೊಂಡಿರಲಿಲ್ಲ ಎಂದು ನ್ಯಾಯಾಲಯ ಒಪ್ಪಿಕೊಂಡಿದೆ.

ಆಧಾರ್ ಕಾರ್ಡ್‌ನಲ್ಲಿ ದಾಖಲಾಗಿರುವ ಬೇರೆ ದಿನಾಂಕವನ್ನು ಆಧರಿಸಿ ಮಹಿಳೆಯನ್ನು ಒಂದು ವರ್ಷ ಮುಂಚಿತವಾಗಿ ಕೆಲಸದಿಂದ ತೆಗೆದುಹಾಕಲು ಸಂಸ್ಥೆಗೆ ಅಧಿಕಾರವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕೈಗಾರಿಕಾ ವಿವಾದಗಳ ಕಾಯ್ದೆಯ ನಿಯಮಗಳನ್ನು ಸಂಸ್ಥೆ ಪಾಲಿಸಿಲ್ಲ ಎಂದು ಹೇಳಿದ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಅಲ್ಲದೆ, ಜೆಜೆ ಎಲೆಕ್ಟ್ರಾನಿಕ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಮಹಿಳಾ ಉದ್ಯೋಗಿಗೆ ನ್ಯಾಯ ಒದಗಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಡ್ರೋನ್ ಹಾರಾಟ ತಾತ್ಕಾಲಿಕ ನಿಷೇಧಎರಡು ವರ್ಷ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಬಾಲಿವುಡ್ ನಟ ಚಿತ್ರರಂಗಕ್ಕೆ ರೀ ಎಂಟ್ರಿ: ದಿಗ್ಗಜ ನಟರ ಬೆಂಬಲಅಮೆರಿಕಾದಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ಪಡೆಯುವ ಸಂಬಳ ಕೇಳಿದರೆ ದಂಗಾಗುವುದು ಗ್ಯಾರಂಟಿದಿನೇಶ್ ಕಾರ್ತಿಕ್ ಹೇಳಿದ್ದ ಗುಟ್ಟು ಬಿಚ್ಚಿಟ್ಟ ಭುವನೇಶ್ವರ್ ಕುಮಾರ್: RCB ಗೆಲುವಿನ ರಹಸ್ಯ: ಡ್ರೆಸ್ಸಿಂಗ್ ರೂಂ ವಾತಾವರಣದ ಬಗ್ಗೆಯೂ ಮಾತುರಾಜಕಾರಣಿಗಳು ಹೇಗಿರಬೇಕು? ರಾಹುಲ್​ ಗಾಂಧಿ ಪ್ರಶ್ನೆಗೆ ಉತ್ತರಿಸಿದ ಶಾರುಖ್​ ಖಾನ್​ ಹಳೆಯ ವಿಡಿಯೋ ಮತ್ತೆ ವೈರಲ್​ಷೇರುಪೇಟೆಯಲ್ಲಿ ಸೆನ್ಸೆಕ್ಸ್ 1,500 ಅಂಕ ಜಿಗಿತ; ನಿಫ್ಟಿ ಬ್ಯಾಂಕ್ 64,600 ದಾಟಿ ಹೊಸ ದಾಖಲೆ‘ಆಧಾರ್ ಕಾರ್ಡ್’ ಜನ್ಮ ದಿನಾಂಕಕ್ಕೆ ಅಧಿಕೃತ ಸಾಕ್ಷ್ಯವಲ್ಲ: ಹೈಕೋರ್ಟ್ ಮಹತ್ವದ ತೀರ್ಪುಧನುಷ್ 55ನೇ ಸಿನಿಮಾ ಬಿಡುಗಡೆ ಹಬ್ಬ; ಚೆನ್ನೈನಿಂದ ಹೈದರಾಬಾದ್‌ವರೆಗೆ ಥಿಯೇಟರ್ ಮುಂದೆ ಅಭಿಮಾನಿಗಳ ಜಾತ್ರೆಸಾಮಾನ್ಯ ಸೀರೆಗಿಂತ ಭಿನ್ನವಾಗಿರುವ ಈ ಮೇಖಲಾ ಚಾದರ್ ವಿಶೇಷತೆ ಏನು? ಅಸ್ಸಾಂ ಉಡುಗೆಯಲ್ಲಿ ಗಮನ ಸೆಳೆದ ರಕುಲ್ ಪ್ರೀತ್ನಿಮ್ಮ ಮನೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು..? ಆದಾಯ ತೆರಿಗೆ ಇಲಾಖೆ ನಿಯಮಗಳೇನು..?