ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತ ಹಾಗೂ ಕಾರ್ಯವೈಖರಿ ವಿರುದ್ಧ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಮತ್ತೊಮ್ಮೆ ತೀವ್ರ ವಾಕ್ಪ್ರಹಾರ ನಡೆಸಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಸಂಸ್ಥೆಯನ್ನು ಸರ್ವವ್ಯಾಪಿ 'ಆಕ್ಟೋಪಸ್'ಗೆ ಹೋಲಿಸಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
'ಆಕ್ಟೋಪಸ್‌ನಂತೆ ಎಲ್ಲಾ ರಂಗಗಳಿಗೂ ಲಗ್ಗೆ':
ಆರ್‌ಎಸ್‌ಎಸ್ ಅನ್ನು ಕಬಂಧಬಾಹುಗಳ ಆಕ್ಟೋಪಸ್‌ಗೆ ಹೋಲಿಸಿದ ಹರಿಪ್ರಸಾದ್, "ಈ ಸಂಘಟನೆಯು ಕೇವಲ ಸಾರ್ವಜನಿಕ ರಂಗಕ್ಕೆ ಸೀಮಿತವಾಗಿರದೆ ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ಕ್ಷೇತ್ರಗಳಲ್ಲೂ ಆಳವಾಗಿ ಬೇರೂರಿದೆ. ಸ್ವತಂತ್ರ ಭಾರತದ ಮೂಲ ಆಶಯಗಳಿಗೆ ತದ್ವಿರುದ್ಧವಾದ ವಿಚಾರಗಳನ್ನು ಬಿತ್ತುವ ಮೂಲಕ ದೇಶವನ್ನು ಅವನತಿಯತ್ತ ಕೊಂಡೊಯ್ಯಲಾಗುತ್ತಿದೆ. ಪ್ರಸ್ತುತ ದೇಶವು ಕವಲುದಾರಿಯಲ್ಲಿ ನಿಂತಿದ್ದು, ಒಂದು ಬದಿಯಲ್ಲಿ ಗಾಂಧಿ ತತ್ವಾದರ್ಶಗಳಿದ್ದರೆ ಮತ್ತೊಂದು ಬದಿಯಲ್ಲಿ ಸಂಘ ಪರಿವಾರದ ಸಿದ್ಧಾಂತವಿದೆ. ಈ ಎರಡರಲ್ಲಿ ಯಾವ ಹಾದಿ ಆಯ್ದುಕೊಳ್ಳಬೇಕು ಎಂಬುದನ್ನು ಜನತೆ ಗಂಭೀರವಾಗಿ ಯೋಚಿಸಬೇಕಿದೆ" ಎಂದರು.
ಮೋಹನ್ ಭಾಗವತ್‌ಗೆ ಸವಾಲು, ಜೆನ್-ಝೀ ದಾರಿತಪ್ಪಿಸುವ ಆರೋಪ:
ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ನಿಲುವನ್ನು ಪ್ರಶ್ನಿಸಿದ ಅವರು, "ಮುಸ್ಲಿಮರನ್ನು ದ್ವೇಷಿಸುವವರು ಹಿಂದೂಗಳೇ ಅಲ್ಲ ಎಂದು ವಿದೇಶಿ ನೆಲದಲ್ಲಿ ಹೇಳಿಕೆ ನೀಡುವ ಭಾಗವತ್, ಅದೇ ಮಾತನ್ನು ಸ್ವದೇಶದಲ್ಲಿ ಭಾರತೀಯರ ಮುಂದೆ ನಿಂತು ಹೇಳುವ ಧೈರ್ಯ ತೋರಲಿ. ಮತ್ತೊಂದೆಡೆ, ಯುವ ಪೀಳಿಗೆಯನ್ನು (ಜೆನ್-ಝೀ) ಮೀಸಲಾತಿಯ ವಿರುದ್ಧ ಎತ್ತಿಕಟ್ಟಿ ದಾರಿ ತಪ್ಪಿಸುವ ಸಂಚು ನಡೆಸಲಾಗುತ್ತಿದೆ" ಎಂದು ಕಿಡಿಕಾರಿದರು.
'ಅಂಧಭಕ್ತರ ಸೃಷ್ಟಿ, ಸುಳ್ಳು ಹೇಳುವುದೇ ತರಬೇತಿ':
ಸಂಘಟನೆಯ ತರಬೇತಿ ಶಿಬಿರಗಳ ಕುರಿತು ವ್ಯಂಗ್ಯವಾಡಿದ ಹರಿಪ್ರಸಾದ್, "ಆರ್‌ಎಸ್‌ಎಸ್ ಕೇವಲ ಅಂಧಭಕ್ತರನ್ನು ಸೃಷ್ಟಿಸುವ ಕಾರ್ಖಾನೆಯಾಗಿದೆ. ಸ್ವಯಂಸೇವಕರಿಗೆ ಸತತ ಮೂರು ತಿಂಗಳ ಕಾಲ ಕೇವಲ ಸಮಾಜದಲ್ಲಿ ಸುಳ್ಳು ಮತ್ತು ವದಂತಿಗಳನ್ನು ಹೇಗೆ ಹಬ್ಬಿಸಬೇಕು ಎಂದಷ್ಟೇ ತರಬೇತಿ ನೀಡಲಾಗುತ್ತದೆ. ಕಾರ್ಯಕರ್ತರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಬಳಿಕ ನಡುನೀರಿನಲ್ಲಿ ಕೈಬಿಡುವುದು ಇವರ ಚಾಳಿ. ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನೇ ತಮ್ಮ ಕಾರ್ಯಕರ್ತನಲ್ಲ ಎಂದು ಸಾರಾಸಗಟಾಗಿ ತಳ್ಳಿಹಾಕಿದ ಇತಿಹಾಸ ಇವರದ್ದು" ಎಂದು ತೀವ್ರ ಆಕ್ರೋಶ ಹೊರಹಾಕಿದರು.