ಬೆಂಗಳೂರು : ಯುಪಿಐ (UPI) ಪಾವತಿಗಳ ಮೇಲೆ ಶುಲ್ಕ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿರುವ ಕ್ರಮಕ್ಕೆ ಬೆಂಗಳೂರಿನ ಪ್ರಮುಖ ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹೊಸ ನಿರ್ಧಾರದಿಂದಾಗಿ ಉದ್ಯಮಗಳ ನಿರ್ವಹಣಾ ವೆಚ್ಚ ಹಾಗೂ ಖರ್ಚುವೆಚ್ಚಗಳು ಗಣನೀಯವಾಗಿ ಏರಿಕೆಯಾಗಲಿವೆ. ಇದರಿಂದಾಗಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಧಕ್ಕೆಯುಂಟಾಗಿ, ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಮತ್ತೆ ಹಳೆಯ ನಗದು ವಹಿವಾಟಿನತ್ತ ಮುಖ ಮಾಡಬಹುದು ಎಂದು ಉದ್ಯಮಿಗಳು ಎಚ್ಚರಿಸಿದ್ದಾರೆ.
ಸರ್ಕಾರವು ಸಣ್ಣ ವ್ಯವಹಾರಗಳು ಹಾಗೂ MSME (ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು) ಕ್ಷೇತ್ರಕ್ಕೆ ಶುಲ್ಕ ವಿನಾಯಿತಿ ನೀಡಿದ್ದರೂ, ಈ ಕ್ರಮದಿಂದ ಮಾರುಕಟ್ಟೆಯ ಮೇಲಾಗುವ ದುಷ್ಪರಿಣಾಮ ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ ಎಂಬುದು ವ್ಯಾಪಾರಿಗಳ ಅಭಿಪ್ರಾಯವಾಗಿದೆ. ಸಣ್ಣ ಸಂಸ್ಥೆಗಳಿಗೆ ವಿನಾಯಿತಿ ಲಭಿಸಿದರೂ, ದೊಡ್ಡ ಪ್ರಮಾಣದ ಬಿಸಿನೆಸ್ ಹಾಗೂ ಅವುಗಳ ಬೃಹತ್ ವಹಿವಾಟುಗಳ ಮೇಲೆ ಈ ಶುಲ್ಕ ದೊಡ್ಡ ಮಟ್ಟದ ಶೇಕಡಾವಾರು ಪರಿಣಾಮ ಬೀರಲಿದ್ದು, ಇಡೀ ಪೂರೈಕೆ ಸರಪಳಿಯ ಮೇಲೆ ಇದರ ಬಿಸಿ ತಟ್ಟಲಿದೆ.
ಡಿಜಿಟಲ್ ಪಾವತಿಗೆ ಶುಲ್ಕ ವಿಧಿಸುವುದು ಸಾರ್ವಜನಿಕರನ್ನು ಹಾಗೂ ಉದ್ಯಮಿಗಳನ್ನು ನಿರುತ್ಸಾಹಗೊಳಿಸುವ ಸಾಧ್ಯತೆಯಿದೆ. ಜನರು ಕ್ರಮೇಣ ಡಿಜಿಟಲ್ ರೂಪದ ವಹಿವಾಟುಗಳನ್ನು ತೊರೆದು ನಗದಿನ ಕಡೆಗೆ ಹಿಂತಿರುಗಿದರೆ, ಸರ್ಕಾರಕ್ಕೆ ಭೌತಿಕ ಕರೆನ್ಸಿ (ನೋಟು) ಮುದ್ರಣ, ಚಲಾವಣೆ ಮತ್ತು ವ್ಯವಸ್ಥೆಯ ನಿರ್ವಹಣೆಗೆ ತಗುಲುವ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ. ಇದು ಸರ್ಕಾರದ ಮುಕ್ತ ಡಿಜಿಟಲ್ ಆರ್ಥಿಕತೆಯ ಗುರಿಗೆ ಹಿನ್ನಡೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ವೇಗದ, ಪಾರದರ್ಶಕ ಮತ್ತು ಸುಲಭ ಪಾವತಿ ವ್ಯವಸ್ಥೆಯ ಮೂಲಕ ಯುಪಿಐ ಇಡೀ ದೇಶದ ವಹಿವಾಟು ಶೈಲಿಯನ್ನೇ ಬದಲಾಯಿಸಿದೆ. ವಿಶೇಷವಾಗಿ ಸಣ್ಣ ವ್ಯಾಪಾರಿಗಳು ಹಾಗೂ ಗ್ರಾಹಕರಲ್ಲಿ ನಗದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಯುಪಿಐ ಪ್ರಮುಖ ಪಾತ್ರ ವಹಿಸಿದೆ. ಇಂತಹ ಸಂದರ್ಭದಲ್ಲಿ ಸಣ್ಣ ಮಟ್ಟದ ಶುಲ್ಕವೂ ಸಹ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಲಿದ್ದು, ಡಿಜಿಟಲ್ ಕ್ರಾಂತಿಗೆ ತೊಡಕಾಗುವ ಮುನ್ನ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ನಿಯೋಗ ಮನವಿ ಮಾಡಿದೆ.