ಶಿವಮೊಗ್ಗ: ವಾಹನದ ದಾಖಲೆಗಳನ್ನು ಗ್ರಾಹಕರ ಹೆಸರಿಗೆ ವರ್ಗಾಯಿಸಿಕೊಡದೆ, ಸೂಕ್ತ ಮಾಹಿತಿ ನೀಡದೆ ವಾಹನವನ್ನು ಅಕ್ರಮವಾಗಿ ವಶಕ್ಕೆ ಪಡೆದು ಸೇವಾ ನ್ಯೂನತೆ ಎಸಗಿದ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹1.10 ಲಕ್ಷ ದಂಡ ಹಾಗೂ ಪರಿಹಾರ ಪಾವತಿಸುವಂತೆ ಮಹತ್ವದ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ
ಶಿವಮೊಗ್ಗ ತಾಲೂಕು ಕುಸ್ಕೂರಿನ ನಿವಾಸಿ ನಿಖಿಲ್ ಆರ್. ಎಂಬುವರು ಫಯಾಜ್ ಬಿನ್ ಬಾಬು ಎಂಬುವರಿಂದ ಐಷರ್ ಪ್ರೊ 3015 (ಸಂಖ್ಯೆ: KA-51-AF-9323) ಸರಕು ಸಾಗಣೆ ವಾಹನವನ್ನು ಖರೀದಿಸಿದ್ದರು. ಈ ವಾಹನಕ್ಕಾಗಿ ಶಿವಮೊಗ್ಗದ ಶಂಕರ ಮಠ ರಸ್ತೆಯಲ್ಲಿರುವ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶಾಖೆಯಿಂದ ₹13.50 ಲಕ್ಷ ಸಾಲವನ್ನು 48 ಕಂತುಗಳಲ್ಲಿ ಮರುಪಾವತಿಸುವ ಷರತ್ತಿನ ಮೇಲೆ ಮಂಜೂರು ಮಾಡಿಸಿಕೊಂಡಿದ್ದರು.
ಆರ್‌ಟಿಒ ನಿಯಮಾವಳಿ ಪ್ರಕಾರ ವಾಹನವನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಡಲು ತಗಲುವ ಎಲ್ಲಾ ವೆಚ್ಚವನ್ನು ಬ್ಯಾಂಕ್ ಪಡೆದುಕೊಂಡಿತ್ತು. ಆದರೆ, ಬ್ಯಾಂಕ್ ಅಧಿಕಾರಿಗಳು ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸದೆ ಅನಗತ್ಯ ವಿಳಂಬ ಧೋರಣೆ ಅನುಸರಿಸಿದ್ದರು. ವಾಹನದ ದಾಖಲೆಗಳು ಕೈಸೇರದ ಕಾರಣ ನಿಖಿಲ್ ಅವರು ವಾಹನವನ್ನು ರಸ್ತೆಗಿಳಿಸಿ ಬಳಸಲಾಗದಿದ್ದರೂ ₹90,000 ಇಎಂಐ ಪಾವತಿಸಿದ್ದರು. ಹೀಗಿದ್ದರೂ, ಕಂತು ಪಾವತಿಯಾಗಿಲ್ಲ ಎಂಬ ನೆಪವೊಡ್ಡಿ ಬ್ಯಾಂಕ್ ಸಿಬ್ಬಂದಿ 2026ರ ಜನವರಿ 27ರಂದು ದೂರುದಾರರ ಮನೆಯ ಬಳಿ ನಿಲ್ಲಿಸಿದ್ದ ವಾಹನವನ್ನು ಏಕಾಏಕಿ ವಶಕ್ಕೆ ಪಡೆದಿದ್ದರು. ಇದರಿಂದ ನೊಂದ ನಿಖಿಲ್ ಅವರು ವಕೀಲರ ಮೂಲಕ ಜಿಲ್ಲಾ ಗ್ರಾಹಕರ ಆಯೋಗದ ಮೆಟ್ಟಿಲೇರಿದ್ದರು.
ಆಯೋಗದ ಕಟ್ಟುನಿಟ್ಟಿನ ಆದೇಶ
ದೂರಿನ ಸಮಗ್ರ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು, ಬ್ಯಾಂಕ್‌ನ ಕೃತ್ಯವು ಸ್ಪಷ್ಟ ಸೇವಾ ನ್ಯೂನತೆಯಾಗಿದೆ ಎಂದು ತೀರ್ಮಾನಿಸಿತು.
ಗ್ರಾಹಕರಿಗೆ ಆದ ಅನ್ಯಾಯವನ್ನು ಎತ್ತಿಹಿಡಿದ ಪೀಠವು, ವಾಹನದ ಎಲ್ಲಾ ದಾಖಲೆಗಳನ್ನು ತಕ್ಷಣವೇ ದೂರುದಾರರ ಹೆಸರಿಗೆ ವರ್ಗಾಯಿಸಿ, ವಾಹನವನ್ನು ಅವರ ವಶಕ್ಕೆ ಮರಳಿಸಬೇಕು ಎಂದು ಬ್ಯಾಂಕ್‌ಗೆ ನಿರ್ದೇಶನ ನೀಡಿದೆ. ಹೆಸರು ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಸಾಲದ ಮಾಸಿಕ ಕಂತುಗಳನ್ನು ಆರ್‌ಬಿಐ ಸುತ್ತೋಲೆ ಮತ್ತು ನಿಯಮಾವಳಿಗಳ ಅನ್ವಯ ಹೊಸದಾಗಿ ಮರುನಿಗದಿಪಡಿಸಬೇಕು ಎಂದು ಸೂಚಿಸಿದೆ.
ಅಲ್ಲದೆ, ಗ್ರಾಹಕರಿಗೆ ಉಂಟುಮಾಡಿದ ಮಾನಸಿಕ ಕಿರುಕುಳಕ್ಕೆ ₹1,00,000 ಪರಿಹಾರ ಹಾಗೂ ದೂರಿನ ಖರ್ಚುವೆಚ್ಚವಾಗಿ ₹10,000 ಸೇರಿದಂತೆ ಒಟ್ಟು ₹1,10,000 ಹಣವನ್ನು 45 ದಿನಗಳ ಒಳಗಾಗಿ ಪಾವತಿಸಬೇಕು. ನಿಗದಿತ ಅವಧಿಯಲ್ಲಿ ಪಾವತಿಸಲು ವಿಫಲವಾದರೆ ವಾರ್ಷಿಕ ಶೇಕಡ 10ರಷ್ಟು ಬಡ್ಡಿ ಸೇರಿಸಿ ಪೂರ್ಣ ಮೊತ್ತವನ್ನು ನೀಡಬೇಕಾಗುತ್ತದೆ ಎಂದು ಆಯೋಗವು ಆದೇಶಿಸಿದೆ.