LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಹ ಸ್ಥಿತಿ ಶಿಕಾರಿಪುರ ಜನತೆಯದ್ದು; ಸಚಿವ ಮಧು ಬಂಗಾರಪ್ಪ

 

ಶಿಕಾರಿಪುರ : ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಏಳನೇ ಬಾರಿ ಕರಡು ಅಧಿಸೂಚನೆ ಹೊರಡಿಸಿರುವುದನ್ನು ಖಂಡಿಸಿ ಹಾಗೂ ವರದಿ ಜಾರಿಗೆ ವಿರೋಧಿಸಿ ಶಿಕಾರಿಪುರ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಈಸೂರಿನಿಂದ ಶಿಕಾರಿಪುರದವರೆಗೆ ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆ ಹಾಗೂ  ಪ್ರತಿಭಟನೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭಾಗವಹಿಸಿದರು.

ಬೆಂಗಳೂರಿನಿಂದ  ಆಗಮಿಸಿದ ಸಚಿವರು ಮಾರ್ಗಮಧ್ಯೆ ಪಾದಯಾತ್ರೆಯನ್ನು ಸೇರಿಕೊಂಡು ಶಿಕಾರಿಪುರದ ತಾಲ್ಲೂಕು ಕಚೇರಿವರೆಗೆ ರೈತರು,  ಕೃಷಿ ಕಾರ್ಮಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಹೆಜ್ಜೆ ಹಾಕಿದರು. ತಾಲ್ಲೂಕು ಕಚೇರಿ ಆವರಣದಲ್ಲಿ ಪಾದಯಾತ್ರೆ ಮುಕ್ತಾಯಗೊಂಡ ಬಳಿಕ ಜ್ಯೋತಿ ಬೆಳಗಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು.

ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ ಸಚಿವರು, “ಕಸ್ತೂರಿ ರಂಗನ್ ವರದಿ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ನಮ್ಮ ಜನರ ಜೊತೆ ನಿಲ್ಲುವುದು ನನ್ನ ಕರ್ತವ್ಯ ಎಂದು ಭಾವಿಸಿ ಶಿಕಾರಿಪುರಕ್ಕೆ ಬಂದಿದ್ದೇನೆ” ಎಂದರು.

ಕೇಂದ್ರ ಸರ್ಕಾರ ಏಳನೇ ಬಾರಿ ಕರಡು ಅಧಿಸೂಚನೆ ಹೊರಡಿಸಿರುವುದನ್ನು ಪ್ರಶ್ನಿಸಿದ ಅವರು, “ನಮ್ಮ ರಾಜ್ಯದ ವಿರುದ್ಧ ಸದಾ ದ್ವೇಷ ಕಾರುವ ಕೇಂದ್ರ ಸರ್ಕಾರಕ್ಕೆ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಏಕೆ ಇಷ್ಟು ಹಠ?” ಎಂದು ಪ್ರಶ್ನಿಸಿದರು.

ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ವಾಗ್ದಾಳಿ

ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಹ ಸ್ಥಿತಿ ಶಿಕಾರಿಪುರ ಜನತೆಯದ್ದು. ಇಲ್ಲಿನ ಶಾಸಕರು ಕಸ್ತೂರಿ ರಂಗನ್ ವಿಚಾರದಲ್ಲಿ ಬರೀ ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಅವರದೇ ಕುಟುಂಬದ ಸಂಸದರು, ಶಾಸಕರ ಸಹೋದರರೇ ಸಂಸದರಾಗಿದ್ದು, ಅವರು ಸಂಸತ್ತಿನಲ್ಲಿ ತುಟಿ ಬಿಚ್ಚುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಪಶ್ಚಿಮಘಟ್ಟದ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಮಹತ್ವದ ಸಭೆ ಕರೆದರೆ ನಮ್ಮ ಸಂಸದರು ಈ ಸಭೆಗೆ ಹೋಗದೆ ದ್ರೋಹ ಬಗೆದಿದ್ದಾರೆ ಎಂದರು.

“ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಕಾಂಗ್ರೆಸ್ ನಿರಂತರವಾಗಿ ಜನರ ಪರವಾಗಿ ಹೋರಾಟ ಮಾಡುತ್ತಿದೆ. ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ನಡೆದ ಪಾದಯಾತ್ರೆಯೂ ಯಶಸ್ವಿಯಾಗಿದೆ. ಇಂದು ಈಸೂರಿನಿಂದ ಶಿಕಾರಿಪುರದವರೆಗೆ ಪಾದಯಾತ್ರೆ ನಡೆಸಿದ್ದೇವೆ. ಈ ವಿಚಾರವನ್ನು ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ” ಎಂದು ಹೇಳಿದರು.

ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ ಸಚಿವರು, ಯಡಿಯೂರಪ್ಪ ಅವರ ಆಡಳಿತದ ಅವಧಿಯಲ್ಲಿ ಜನರಿಗೆ ಏನು ಪ್ರಯೋಜನವಾಗಿದೆ ಎಂದು ಪ್ರಶ್ನಿಸಿದರು.

‘ಅಪ್ಪಾಜಿಗೆ ಕೊಟ್ಟಂತೆ ನನಗೂ ಹೃದಯದಲ್ಲಿ ಜಾಗ ನೀಡಿ’

ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಿಗೂ ಶಿಕಾರಿಪುರಕ್ಕೂ ಇದ್ದ ನಂಟನ್ನು ಸ್ಮರಿಸಿದ ಸಚಿವರು, “ನನ್ನ ಕ್ಷೇತ್ರ ಸೊರಬ ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದರೂ ನಿಮ್ಮೊಂದಿಗೆ ನಿಲ್ಲಲು ಬಂದಿದ್ದೇನೆ. ನಮ್ಮ ತಂದೆಯವರು ನಿಮ್ಮ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರು ಕಾಂಗ್ರೆಸ್‌ನಿಂದ ಸಂಸದರಾದಾಗ ಅವರಿಗೆ ಹೆಚ್ಚು ಮತ ನೀಡಿ ಗೆಲ್ಲಿಸಿದವರು ಶಿಕಾರಿಪುರದ ಜನ. ನಿಮ್ಮ ಋಣ ನಮ್ಮ ಮೇಲಿದೆ. ಅದನ್ನು ತೀರಿಸಲು ಇಲ್ಲಿಗೆ ಬಂದಿದ್ದೇನೆ. ಅಪ್ಪಾಜಿಗೆ ಕೊಟ್ಟಂತೆ ನನಗೂ ನಿಮ್ಮ ಹೃದಯದಲ್ಲಿ ಜಾಗ ನೀಡಿ” ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು ಅವರು ಭೂಮಿಯ ಹಕ್ಕು ನೀಡಿದ್ದರೆ, ತಮ್ಮ ತಂದೆ ಎಸ್. ಬಂಗಾರಪ್ಪ ಅವರು ಉಚಿತ ಪಂಪ್‌ಸೆಟ್ ಯೋಜನೆ ಜಾರಿಗೆ ತಂದಿದ್ದರು ಎಂದು ಸ್ಮರಿಸಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಅಡಕೆ ತೋಟಗಳ ವಿಸ್ತರಣೆಗೆ ಬಂಗಾರಪ್ಪ ಅವರ ಕೊಡುಗೆ ಮಹತ್ವದ್ದಾಗಿದೆ ಎಂದರು.

ಬಗರ್ ಹುಕುಂ ಅರ್ಜಿಗಳೇ ಶೇ.50

ಶಿಕಾರಿಪುರದಲ್ಲಿ ಇತ್ತೀಚೆಗೆ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ 624 ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ ಸುಮಾರು ಶೇ.50ರಷ್ಟು ಬಗರ್ ಹುಕುಂ ಅರ್ಜಿಗಳಾಗಿವೆ ಎಂದು ಸಚಿವರು ತಿಳಿಸಿದರು.

“ನನ್ನ ಕ್ಷೇತ್ರಕ್ಕೆ ಬಂದು ನೋಡಿ. ಬಗರ್ ಹುಕುಂ ರೈತರಿಗೆ ಹಕ್ಕುಪತ್ರಗಳನ್ನು ವಿತರಿಸಿದ್ದೇನೆ. ಕಾಗೋಡು ತಿಮ್ಮಪ್ಪ ಅವರ ಆಶಯದಂತೆ ಅರ್ಹರೆಲ್ಲರಿಗೂ ಬಗರ್ ಹುಕುಂ ಹಕ್ಕುಪತ್ರ ಕೊಡಿಸಲು ಕಾಂಗ್ರೆಸ್ ಬದ್ಧವಾಗಿದೆ. ನಾನು ವಿರೋಧ ಪಕ್ಷದಲ್ಲಿದ್ದಾಗಲೇ 6,200 ಬಗರ್ ಹುಕುಂ ಹಕ್ಕುಪತ್ರಗಳನ್ನು ವಿತರಿಸಿದ್ದೇನೆ” ಎಂದರು.

‘ಗ್ಯಾರಂಟಿ ಯೋಜನೆಗಳು ಜನರ ಮನೆ ತಲುಪಿವೆ’

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡ ಸಚಿವರು, “ಹಸಿದವರ ಹೊಟ್ಟೆ ತುಂಬಿಸಿದ ಪುಣ್ಯಾತ್ಮ ಸಿದ್ದರಾಮಯ್ಯ. ಅವರು ನೀಡಿದ ಗ್ಯಾರಂಟಿ ಯೋಜನೆಗಳು ಇಂದು ರಾಜ್ಯದ ಪ್ರತಿಯೊಂದು ವರ್ಗದ ಜನರ ಮನೆ ತಲುಪಿವೆ” ಎಂದರು.

‘ದಡ್ಡರು ಯಾರು ಎಂಬುದನ್ನು ಜನರೇ ತೀರ್ಮಾನಿಸಲಿ’

ತಮ್ಮನ್ನು ಶಿಕ್ಷಣ ಸಚಿವನಾಗಿ ಮುಂದುವರಿಸಿರುವ ಕುರಿತು ಮಾತನಾಡಿದ ಮಧು ಬಂಗಾರಪ್ಪ, ಬಿಜೆಪಿ ನಾಯಕರು ತಾವು ಮತ್ತೆ ಸಚಿವರಾಗುವುದಿಲ್ಲ ಎಂದು ಟೀಕಿಸಿದ್ದರು. ಆದರೆ ತಮ್ಮ ಕಾರ್ಯವನ್ನು ಗುರುತಿಸಿ ಕಾಂಗ್ರೆಸ್ ನಾಯಕತ್ವ ಮತ್ತೊಮ್ಮೆ ಸಚಿವ ಸ್ಥಾನ ನೀಡಿದೆ ಎಂದರು.

ಶಿಕ್ಷಣ ಕ್ಷೇತ್ರದ ಸಾಧನೆಗಳ ಕುರಿತು ಮಾತನಾಡಿದ ಅವರು, “ಬಿಜೆಪಿ ಆಡಳಿತದ ಅವಧಿಯಲ್ಲಿ ನೂರಕ್ಕೆ 15ರಿಂದ 20 ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದರು. ನಾನು ಶಿಕ್ಷಣ ಸಚಿವನಾದ ಬಳಿಕ ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಪ್ರಮಾಣ ನೂರಕ್ಕೆ ಇಬ್ಬರಿಗೆ ಇಳಿದಿದೆ” ಎಂದು ಹೇಳಿದರು.

1ನೇ ತರಗತಿಯಿಂದ ಪಿಯುಸಿವರೆಗೆ ಉಚಿತ ನೋಟ್‌ಬುಕ್

ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದ ಸಚಿವರು, ಉಚಿತ ಶಿಕ್ಷಣದ ಜೊತೆಗೆ ಶೂ, ಸಾಕ್ಸ್, ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ ಎಂದರು.

“ಇದೇ ವರ್ಷದಿಂದ 1ನೇ ತರಗತಿಯಿಂದ ಪಿಯುಸಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ನೀಡಲಾಗುವುದು. ಇದರಿಂದ ಪೋಷಕರ ಮೇಲಿನ ಆರ್ಥಿಕ ಹೊರೆಯೂ ಕಡಿಮೆಯಾಗಲಿದೆ. ಕಾಂಗ್ರೆಸ್ ಸರ್ಕಾರ ಜನರ ಸರ್ಕಾರ” ಎಂದು ಮಧು ಬಂಗಾರಪ್ಪ ಹೇಳಿದರು.

ಕರ್ನಾಟಕ ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಂಡಾರಿ ಮಾಲತೇಶ್, ಮಾಜಿ ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ಶಿಕಾರಿಪುರ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜು ನಾಯ್ಕ್ ಹಾಗೂ ಪ್ರಮುಖ ಕಾಂಗ್ರೆಸ್ ಮುಖಂಡರಾದ ಗೋಣಿ ಮಾಲತೇಶ್, ಈರೇಶ್ ಎನ್.ವಿ, ರಾಘವೇಂದ್ರ ನಾಯ್ಕ್, ದರ್ಶನ್ ಉಳ್ಳಿ ಸೇರಿದಂತೆ ಅನೇಕ ಯುವ ಕಾಂಗ್ರೆಸ್ ನಾಯಕರು, ಪಕ್ಷದ ಕಾರ್ಯಕರ್ತರು, ಮಹಿಳಾ ನಾಯಕಿಯರು ಹಾಗೂ ವಿವಿಧ ತಾಲೂಕುಗಳ ಕಾರ್ಯಕರ್ತ, ಮುಖಂಡರುಗಳು ಹಾಜರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING: ವಿಧಾನಸಭೆ ವಿಶೇಷ ಅಧಿವೇಶನದ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ರೈತರ ಸಮಸ್ಯೆ, ಕಸ್ತೂರಿರಂಗನ್ ವರದಿ ಕುರಿತು ಚರ್ಚೆಸರ್ಕಾರದ ಪ್ರಕರಣಗಳಲ್ಲಿ ಸಮರ್ಥ ವಾದ ಮಂಡನೆಗೆ ಒತ್ತು ನೀಡಿ: ಪ್ರಾಸಿಕ್ಯೂಷನ್‌ ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆಅಕ್ರಮವಾಗಿ ವಾಹನ ಜಪ್ತಿ ಮಾಡಿದ ಬ್ಯಾಂಕ್ ಗೆ 1.10 ಲಕ್ಷ ದಂಡ ವಿಧಿಸಿದ ಗ್ರಾಹಕರ ಆಯೋಗವೈದ್ಯಕೀಯದಲ್ಲಿ 384 ಸೀಟು ಉಳಿಕೆ, ದಂತ ವೈದ್ಯಕೀಯ ಎಲ್ಲ ಸೀಟು ಹಂಚಿಕೆ: ಯುಜಿ ನೀಟ್ 2ನೇ ಸುತ್ತಿನ ಫಲಿತಾಂಶ ಪ್ರಕಟBIG NEWS: ಮಾರ್ಚ್ ಒಳಗೆ ಜೆಜೆಎಂ ಕಾಮಗಾರಿ ಮುಗಿಸಿ, ಇಲ್ಲದಿದ್ದರೆ ಕಠಿಣ ಕ್ರಮ: ಗುತ್ತಿಗೆದಾರರಿಗೆ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆBREAKING: ಐದೇ ದಿನಗಳಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಕೆಇಎಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಹ ಸ್ಥಿತಿ ಶಿಕಾರಿಪುರ ಜನತೆಯದ್ದು; ಸಚಿವ ಮಧು ಬಂಗಾರಪ್ಪಜೈಲಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ಪ್ರಕರಣ: ಜೈಲು ಸಿಬ್ಬಂದಿ ಸೇರಿ ಏಳು ಜನರ ವಿರುದ್ಧ FIR ದಾಖಲುಸತೀಶ್ ಜಾರಕಿಹೊಳಿ ಪರ ಸಿಎಂ ಡಿ.ಕೆ.ಶಿವಕುಮಾರ್ ಬ್ಯಾಟಿಂಗ್: ಕಾಂಗ್ರೆಸ್ ಪಕ್ಷವನ್ನೇ ಗುರಿಯಾಗಿಸಿ ED ದಾಳಿ ಆರೋಪನೇರ ಕಾಲೇಜು ಚುನಾವಣೆಗೆ ಸರ್ಕಾರದ ಆದೇಶ: ನಿಯಮ ಧಿಕ್ಕರಿಸಿ ಮಂಗಳೂರು ವಿವಿಯಲ್ಲಿ ಪರೋಕ್ಷ ಮತದಾನ ಆರೋಪ