ಬೆಂಗಳೂರು: ರೋಗಿಗಳಿಗೆ ಆಸ್ಪತ್ರೆ ಬಿಲ್ಗಳ ಮೇಲಿನ ನಡುಕವನ್ನು ತಪ್ಪಿಸಲು ಮತ್ತು ಚಿಕಿತ್ಸಾ ವೆಚ್ಚದಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಕರ್ನಾಟಕ ಆರೋಗ್ಯ ಇಲಾಖೆಯು ಮಹತ್ವದ ಕ್ರಮಕ್ಕೆ ಮುಂದಾಗಿದೆ. ನವೆಂಬರ್ 1ರಿಂದ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಟ್ರಸ್ಟ್ ಆಸ್ಪತ್ರೆಗಳಲ್ಲಿ ಹೊಸ ನಿಯಮಗಳು ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಆಸ್ಪತ್ರೆಗಳ ಅತಿಯಾದ ಶುಲ್ಕ ವಸೂಲಿಗೆ ಬ್ರೇಕ್ ಬೀಳಲಿದೆ.
ಹೊಸ ನಿಯಮದ ಪ್ರಕಾರ, ಆಸ್ಪತ್ರೆಗಳು ಲಭ್ಯವಿರುವ ಚಿಕಿತ್ಸೆಗಳು ಮತ್ತು ಅವುಗಳ ಅಧಿಕೃತ ದರಪಟ್ಟಿಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ನೋಂದಣಿ ಕೌಂಟರ್ ಮುಂದೆ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಇದರಿಂದ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಚಿಕಿತ್ಸಾ ವೆಚ್ಚದ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಲು ಅನುಕೂಲವಾಗಲಿದೆ.
ಇನ್ನು ಮುಂದೆ ಔಷಧಗಳು ಹಾಗೂ ವೈದ್ಯಕೀಯ ಉಪಕರಣಗಳ ಬಿಲ್ಲಿಂಗ್ನಲ್ಲಿ ಆಸ್ಪತ್ರೆಗಳು ಅವುಗಳ ನೈಜ ಖರೀದಿ ಬೆಲೆ (Purchase Price) ಮತ್ತು ಗರಿಷ್ಠ ಚಿಲ್ಲರೆ ಬೆಲೆ (MRP) ಎರಡನ್ನೂ ಪ್ರತ್ಯೇಕವಾಗಿ ಬಿಲ್ನಲ್ಲಿ ನಮೂದಿಸಬೇಕು. ಔಷಧದ ಹೆಸರು, ಬ್ರ್ಯಾಂಡ್, ಬ್ಯಾಚ್ ಸಂಖ್ಯೆ ಮತ್ತು ಅವಧಿ ಮುಗಿಯುವ ದಿನಾಂಕದಂತಹ ಸಂಪೂರ್ಣ ವಿವರಗಳು ಬಿಲ್ನಲ್ಲಿರಬೇಕು.
ಆಸ್ಪತ್ರೆಗಳು ಔಷಧಗಳ ಖರೀದಿ ಇನ್ವಾಯ್ಸ್ ಮತ್ತು ಬಿಲ್ಲಿಂಗ್ ದಾಖಲೆಗಳನ್ನು ಕನಿಷ್ಠ ಮೂರು ವರ್ಷಗಳವರೆಗೆ ಕಡ್ಡಾಯವಾಗಿ ಸಂರಕ್ಷಿಸಬೇಕು. ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಔಷಧ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ಈ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದ್ದು, ನಿಯಮ ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.