ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಕರ್ನಾಟಕ ಸರ್ಕಾರವು, ನೌಕರರಿಗೆ ಸಂಬಂಧಿಸಿದ ಪ್ರಮುಖ ಸಿಬ್ಬಂದಿ ಸೇವೆಗಳನ್ನು ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ ಸೇರ್ಪಡೆಗೊಳಿಸಿ ಮಹತ್ವದ ಅಧಿಸೂಚನೆ ಹೊರಡಿಸಿದೆ.
ಆಡಳಿತ ಸುಧಾರಣಾ ಆಯೋಗ-2ರ 7ನೇ ವರದಿಯ ಶಿಫಾರಸುಗಳನ್ವಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಡಿಯಲ್ಲಿ ಅಧಿಸೂಚಿತಗೊಂಡಿದ್ದ ಸೇವೆಗಳನ್ನು ಇತರೆ ಎಲ್ಲಾ ಇಲಾಖೆಗಳ ಕ್ಷೇತ್ರ ಮಟ್ಟದ ಕಚೇರಿಗಳು ಹಾಗೂ ಸಂಸ್ಥೆಗಳಿಗೂ ವಿಸ್ತರಿಸಲಾಗಿದೆ.
ಈ ನೂತನ ನಿಯಮದ ಪ್ರಕಾರ, ಸರ್ಕಾರಿ ನೌಕರರ ವೇತನ ವಿತರಣೆ, ಕಾಲಮಿತಿ ವೇತನ ಬಡ್ತಿ, ರಜೆ ಮಂಜೂರಾತಿ, ಭವಿಷ್ಯ ನಿಧಿ (GPF), ಪಿಂಚಣಿ ಪ್ರಸ್ತಾವನೆ ಸೇರಿದಂತೆ ಒಟ್ಟು 35 ಸಿಬ್ಬಂದಿ ಸೇವೆಗಳಿಗೆ ಅಧಿಕಾರಿಗಳು ನಿಗದಿತ ಕೆಲಸದ ದಿನಗಳ ಒಳಗಾಗಿ ಕಡ್ಡಾಯವಾಗಿ ಇತ್ಯರ್ಥಪಡಿಸಬೇಕಾಗಿದೆ.
ಆಡಳಿತಕ್ಕೆ ಚುರುಕು, ವಿಳಂಬಕ್ಕೆ ಮುಕ್ತಿ
ಸರ್ಕಾರಿ ನೌಕರರು ತಮ್ಮ ನ್ಯಾಯಯುತ ಹಕ್ಕುಗಳು ಹಾಗೂ ಸೇವಾ ಸೌಲಭ್ಯಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರಲು ಈ ಕ್ರಮ ಕೈಗೊಳ್ಳಲಾಗಿದೆ. ಅರ್ಜಿಯನ್ನು ಇತ್ಯರ್ಥಗೊಳಿಸಲು ವಿಳಂಬವಾದರೆ ಮೊದಲನೇ ಹಾಗೂ ಎರಡನೇ ಮೇಲ್ಮನವಿಗಳನ್ನು ಇತ್ಯರ್ಥಪಡಿಸಲು ಸಕ್ಷಮ ಪ್ರಾಧಿಕಾರ ಹಾಗೂ ಮೇಲ್ಮನವಿ ಪ್ರಾಧಿಕಾರಗಳಿಗೆ ತಲಾ 35 ಕೆಲಸದ ದಿನಗಳ ಏಕರೂಪದ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ಅಲ್ಲದೆ, ಎಲ್ಲಾ ಇಲಾಖೆಗಳ ನೋಡಲ್ ಅಧಿಕಾರಿಗಳು 15 ದಿನಗಳ ಒಳಗಾಗಿ ತಮ್ಮ ಇಲಾಖೆಯ ಹೆಸರಿಸಲಾದ ಅಧಿಕಾರಿ, ಸಕ್ಷಮ ಪ್ರಾಧಿಕಾರ ಮತ್ತು ಮೇಲ್ಮನವಿ ಪ್ರಾಧಿಕಾರಗಳ ಪಟ್ಟಿಯನ್ನು ಸಕಾಲ ಮಿಷನ್ಗೆ ಸಲ್ಲಿಸಲು ನಿರ್ದೇಶನ ನೀಡಲಾಗಿದೆ.
'ಸಕಾಲ' ವ್ಯಾಪ್ತಿಗೆ ಒಳಪಟ್ಟ 35 ಸಿಬ್ಬಂದಿ ಸೇವೆಗಳು ಮತ್ತು ನಿಗದಿತ ಕಾಲಮಿತಿ:
-
ಸಂಬಳ ವಿತರಣೆ: 3 ಕೆಲಸದ ದಿನಗಳು
-
ಕಾಲಮಿತಿ ವೇತನ ಬಡ್ತಿ ಮಂಜೂರಾತಿ: 15 ಕೆಲಸದ ದಿನಗಳು
-
ಹಿರಿಯ ವೇತನ ಶ್ರೇಣಿ ಮಂಜೂರಾತಿ: 30 ಕೆಲಸದ ದಿನಗಳು
-
ವಾರ್ಷಿಕ ಬಡ್ತಿ ಮಂಜೂರಾತಿ: 15 ಕೆಲಸದ ದಿನಗಳು
-
ವಿವಿಧ ಬಗೆಯ ರಜೆಗಳ ಮಂಜೂರಾತಿ (ಗಳಿಕೆ ರಜೆ / ಪರಿವರ್ತಿತ ರಜೆ / ಅರ್ಧ ವೇತನ ರಜೆ / ಅಸಾಧಾರಣ ರಜೆ): 10 ಕೆಲಸದ ದಿನಗಳು
-
ವೈದ್ಯಕೀಯ ವೆಚ್ಚ ಮರುಪಾವತಿ ಮಂಜೂರಾತಿ: 30 ಕೆಲಸದ ದಿನಗಳು
-
ಪ್ರವಾಸ ಭತ್ಯೆ ಕೋರಿಕೆ / ಮಂಜೂರಾತಿ: 30 ಕೆಲಸದ ದಿನಗಳು
-
ಪಿಂಚಣಿ ಮತ್ತು ಉಪದಾನಗಳ ಇತ್ಯರ್ಥದ ಪ್ರಸ್ತಾವನೆಗಳನ್ನು ಮಹಾಲೇಖಪಾಲರಿಗೆ ಕಳುಹಿಸುವುದು: 30 ಕೆಲಸದ ದಿನಗಳು
-
ಸಾಮಾನ್ಯ ಭವಿಷ್ಯ ನಿಧಿ (GPF) ಮುಂಗಡ ಮತ್ತು ಭಾಗಶಃ / ಅಂತಿಮ ಹಿಂಪಡೆಯುವಿಕೆ ಮಂಜೂರಾತಿ: 30 ಕೆಲಸದ ದಿನಗಳು
-
ಹಬ್ಬದ ಮುಂಗಡ ಮಂಜೂರಾತಿ: 7 ಕೆಲಸದ ದಿನಗಳು
-
ವರ್ಗಾವಣೆ / ನಿಯೋಜನೆ ಮೇರೆಗೆ ಅಂತಿಮ ವೇತನ ಪ್ರಮಾಣಪತ್ರ ನೀಡುವುದು: 15 ಕೆಲಸದ ದಿನಗಳು
-
ಸೇವಾ ಪುಸ್ತಕವನ್ನು ಕಳುಹಿಸುವುದು: 15 ಕೆಲಸದ ದಿನಗಳು
-
ಪರೀಕ್ಷಾರ್ಥ ಸೇವಾವಧಿ ಘೋಷಣೆ / ವಿಸ್ತರಣೆ: 30 ಕೆಲಸದ ದಿನಗಳು
-
ಸ್ಥಾನಪನ್ನಾವಧಿ ಘೋಷಿಸುವುದು: 30 ಕೆಲಸದ ದಿನಗಳು
-
ವೇತನ ಪ್ರಮಾಣ ಪತ್ರ ನೀಡುವುದು: 3 ಕೆಲಸದ ದಿನಗಳು
-
ಆಧರ್ಪಿತ ರಜೆಯ ವೇತನ ಮಂಜೂರಾತಿ: 15 ಕೆಲಸದ ದಿನಗಳು
-
ಅರ್ಜಿಯನ್ನು ಸಮುಚಿತ ಮಾರ್ಗದಲ್ಲಿ ರವಾನಿಸುವುದು (KGID, BIS, GPF ಇತ್ಯಾದಿ): 7 ಕೆಲಸದ ದಿನಗಳು
-
ಪ್ರಭಾರ ಭತ್ಯೆ ಮಂಜೂರಾತಿ: 10 ಕೆಲಸದ ದಿನಗಳು
-
ಬಾಕಿ ವೇತನ ಮಂಜೂರಾತಿ: 90 ಕೆಲಸದ ದಿನಗಳು
-
ಅನುಕಂಪದ ಆಧಾರದ ಮೇಲೆ ನೇಮಕಾತಿ: 90 ಕೆಲಸದ ದಿನಗಳು
-
ಅಧಿಕಾರಿಗಳಿಗೆ ಕೆಸಿಎಸ್ಆರ್ 53(ಎಫ್) ರನ್ವಯ ಪ್ರಮಾಣ ಪತ್ರ ನೀಡುವುದು: 15 ಕೆಲಸದ ದಿನಗಳು
-
ಜೇಷ್ಠತಾ ಪಟ್ಟಿಯಲ್ಲಿ ಹೆಸರು ಮತ್ತು ಕ್ರಮ ಸಂಖ್ಯೆ ತಿದ್ದುಪಡಿ: 30 ಕೆಲಸದ ದಿನಗಳು
-
ಮರಣ ಪ್ರಕರಣಗಳ ಇತ್ಯರ್ಥ: 30 ಕೆಲಸದ ದಿನಗಳು
-
ಕಡ್ಡಾಯ ನಿರೀಕ್ಷಣಾ ಅವಧಿ ಮಂಜೂರಾತಿ: 30 ಕೆಲಸದ ದಿನಗಳು
-
ಫಾರ್ಮ್-16 ನೀಡುವುದು: 5 ಕೆಲಸದ ದಿನಗಳು
-
ಪಾಸ್ಪೋರ್ಟ್ ಪಡೆಯಲು ನಿರಾಕ್ಷೇಪಣಾ ಪತ್ರ (NOC) ನೀಡುವುದು: 10 ಕೆಲಸದ ದಿನಗಳು
-
ವಾಹನ ಮುಂಗಡ / ಗೃಹ ನಿರ್ಮಾಣ ಮುಂಗಡ ಮಂಜೂರಾತಿ: 15 ಕೆಲಸದ ದಿನಗಳು
-
ಮನೆ / ನಿವೇಶನ / ವಾಹನ ಖರೀದಿ ಅಥವಾ ಮಾರಾಟಕ್ಕೆ ಅನುಮತಿ: 30 ಕೆಲಸದ ದಿನಗಳು
-
ವಿದೇಶ ಪ್ರವಾಸಕ್ಕೆ ಅನುಮತಿ: 15 ಕೆಲಸದ ದಿನಗಳು
-
ಉನ್ನತ ವ್ಯಾಸಂಗಕ್ಕೆ ಅನುಮತಿ: (ಸರ್ಕಾರ ನಿಗದಿಪಡಿಸಿದ ಕೆಲಸದ ದಿನಗಳು)
-
ಪ್ರಥಮ ವೇತನ ಪಡೆಯಲು ಅನುಮತಿ: 7 ಕೆಲಸದ ದಿನಗಳು
-
ಸೇವಾ ಪುಸ್ತಕದ ನಕಲು ನೀಡುವುದು: 15 ಕೆಲಸದ ದಿನಗಳು
-
ಅಂಗವಿಕಲ ಭತ್ಯೆ ಮಂಜೂರಾತಿ: 90 ಕೆಲಸದ ದಿನಗಳು
-
ಕುಟುಂಬ ಯೋಜನೆ ಅನುಸರಣೆಗೆ ವಿಶೇಷ ಭತ್ಯೆ ಮಂಜೂರಾತಿ: 30 ಕೆಲಸದ ದಿನಗಳು
-
ಅನ್ಯ ಸೇವಾ ನಿಯೋಜನೆಯಲ್ಲಿರುವ ಅಧಿಕಾರಿಗಳಿಗೆ ಷರತ್ತು ಮತ್ತು ನಿಬಂಧನೆಗಳು: 15 ಕೆಲಸದ ದಿನಗಳು
ಈ ಐತಿಹಾಸಿಕ ತೀರ್ಮಾನದಿಂದಾಗಿ ಇಲಾಖೆಗಳಲ್ಲಿ ಕಡತಗಳು ದೀರ್ಘಕಾಲ ಬಾಕಿ ಉಳಿಯುವುದು ತಪ್ಪಲಿದ್ದು, ನೌಕರರ ಆಡಳಿತಾತ್ಮಕ ಕೆಲಸಗಳು ಶೀಘ್ರವಾಗಿ ವಿಲೇವಾರಿಯಾಗಲಿವೆ.

