ಹಾಸನ: ಮುಂಬರುವ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಬರುವುದರಲ್ಲಿ ಅನುಮಾನವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿರುವುದರಲ್ಲಿ ಯಾವುದೇ ಅತಿಶೀಯೋಕ್ತಿ ಇಲ್ಲ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.
ಶ್ರವಣಬೆಳಗೊಳದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು; ರಾಜ್ಯದಲ್ಲಿ ನಡೆಯುತ್ತಿರುವ ಈಗೀನ ಬೆಳವಣಿಗೆ ಏನಿದೆ, ರಾಜ್ಯ ಸರ್ಕಾರ ನಡೆಸುತ್ತಿರುವವರ ಆ ಮನೋಭಾವನೆಗಳು ಹಾಗೂ ಅದರ ಬಗ್ಗೆ ಯಡಿಯೂರಪ್ಪ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅದು ನೈಜವಾದ ಪ್ರತಿಕ್ರಿಯೆ. ಮುಂದಿನ ವರ್ಷ ಈ ಸರ್ಕಾರ ಅಂತ್ಯವಾಗಬಹುದು ಎಂದು ಭವಿಷ್ಯ ನುಡಿದರು.
ಈ ಸರ್ಕಾರ ಹೋಗುತ್ತಿರುವ ಮಾರ್ಗ ನೋಡಿದರೆ ಜನವೇ ತೆಗೆಯುತ್ತಾರೆ. ಯಡಿಯೂರಪ್ಪ ಅವರು ಹೇಳಿರುವುದರಲ್ಲಿ ಅತಿಶಯೋಕ್ತಿ ಇಲ್ಲ. ಮುಂದೆ 2028ರಲ್ಲಿ ಅಲ್ಲ, 2027ರಲ್ಲೇ ಚುನಾವಣೆ ಹೋಗುವ ಪರಿಸ್ಥಿತಿ ಬಂದು ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ ಎಂಬುದು ನನ್ನ ಅಭಿಪ್ರಾಯ. ಯಡಿಯೂರಪ್ಪ ಅವರ ಮಾತಿಗೆ ನನ್ನ ಸಹಮತವೂ ಇದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಸ್ಟಿಂಗ್ ಮೂಲಪುರುಷ ಈ ಮುಖ್ಯಮಂತ್ರಿ:
ಸ್ಟಿಂಗ್ ಆಪರೇಷನ್ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿರುವುದರಲ್ಲಿ ಸತ್ಯ ಇದೆ ಎಂಬ ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ಓಕೆ ಪ್ರತಿಕ್ರಿಸಿದ ಕೇಂದ್ರ ಸಚಿವರು; ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸ್ಟಿಂಗ್ ಕುತಂತ್ರದಿಂದಲೇ ಈ ಸರಕಾರ ಹೋಗುತ್ತದೆ. ಇದರ ಮೂಲಪುರುಷ ಈಗಿನ ಮುಖ್ಯಮಂತ್ರಿ ಎಂಬುದು ಎಲ್ಲರೂ ಬಲ್ಲರು. ಸ್ಟಿಂಗ್ ಆಪರೇಷನ್ ಎಂಬ ಮಹಾ ಕುತಂತ್ರವೇ ಕಾಂಗ್ರೆಸ್ ಸರ್ಕಾರವನ್ನು ಬಲಿ ತೆಗೆದುಕೊಳ್ಳಬಹುದು. ಈ ಮುಖ್ಯಮಂತ್ರಿಯ ಬಗ್ಗೆ ಯಾರಿಗೂ ನಂಬಿಕೆ ವಿಶ್ವಾಸ ಇಲ್ಲ. ಯಾರ ವಿರುದ್ಧ ಎಂತಹ ಕುತಂತ್ರ ಮಾಡುತ್ತಾರೆ ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ. ಹೀಗಾಗಿ ಈ ಸರ್ಕಾರ ಯಾವುದೇ ಸಂದರ್ಭದಲ್ಲಿ ಬಿದ್ದು ಹೋಗುವ ಸಂದರ್ಭ ಎದುರಾಗಬಹುದು. ಇವರ ನಡವಳಿಕೆ ಕಾರ್ಯ ಶೈಲಿಯ ರೀತಿ ಗಮನಿಸಿದರೆ ಸರ್ಕಾರಕ್ಕೆ ಭವಿಷ್ಯ ಇಲ್ಲ ಎನ್ನುವುದು ತಿಳಿಯುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ನನ್ನ ಪ್ರಕಾರ ಈ ಸರ್ಕಾರ ಕೊನೆಯ ಹಂತದಲ್ಲಿದೆ ಎಂದ ಅವರು, ಕಾಂಗ್ರೆಸ್ ಪಕ್ಷದವರೇ ಕಾಂಗ್ರೆಸ್ ನವರ ವಿರುದ್ಧ ಸ್ಟಿಂಗ್ ಮಾಡುತ್ತಿದ್ದರೆ ಈ ಸರ್ಕಾರ ಹೇಗೆ ಉಳಿಯಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಕುಮಾರಸ್ವಾಮಿಗೆ ರಕ್ತ ಕುದಿಯುತ್ತಿದ್ದರೆ ನಾನು ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು; ಅವರ ಬಗ್ಗೆ ಚರ್ಚೆ ಬೇಕಿಲ್ಲ. ಇಂಗ್ಲೀಷ್ ಇಲ್ಲ ಅಂದರೆ ಉರ್ದು ಚಾನೆಲ್ಗೆ ಹೋಗಿ ಮಾತನಾಡಲು ಹೇಳಿ ಎಂದು ತಿರುಗೇಟು ಕೊಟ್ಟರು.