ನಿನ್ನೆ ( ಆಗಸ್ಟ್ 26 ) ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಬಿಡುಗಡೆಯಾಗಿದೆ. ಕೆಜಿಎಫ್ ಚಿತ್ರ ಸರಣಿಯ ಯಶಸ್ಸಿನ ಬಳಿಕ ತೆರೆ ಕಂಡ ಈ ಚಿತ್ರ ಸಹ ಬೃಹತ್ ಹೈಪ್ ಹುಟ್ಟುಹಾಕಿತ್ತು ಹಾಗೂ ಚಿತ್ರ ಯಾವ ರೀತಿಯ ಯಶಸ್ಸನ್ನು ಸಾಧಿಸಲಿದೆ ಎಂಬ ಕುತೂಹಲ ಅಭಿಮಾನಿಗಳು ಮತ್ತು ಸಿನಿ ರಸಿಕರಲ್ಲಿ ಇತ್ತು.
ಇನ್ನು ಕನ್ನಡಿಗರ ಪಾಲಿಗೆ ಸದ್ಯ ಫೇಸ್ ಆಫ್ ಸ್ಯಾಂಡಲ್‌ವುಡ್ ಎನಿಸಿಕೊಂಡಿರುವ ಯಶ್ ಮತ್ತೊಮ್ಮೆ ದೊಡ್ಡದಾಗಿ ಗೆಲ್ಲಲಿ ಎನ್ನುವ ಆಸೆ ಕನ್ನಡಿಗರಲ್ಲಿತ್ತು. ಆದರೆ ಚಿತ್ರದ ಮೊದಲ ಪ್ರದರ್ಶನ ಮುಗಿಯುವ ಮುನ್ನವೇ ತೆಲುಗಿನ ಕೆಲ ಸಿನಿಮಾ ಪೇಜ್‌ಗಳು ಚಿತ್ರ ಚೆನ್ನಾಗಿಲ್ಲ, ಕೆಟ್ಟದಾಗಿದೆ, ಎರಡು ಸ್ಟಾರ್‌ಗಳನ್ನೂ ಸಹ ಕೊಡಲಾಗುವುದಿಲ್ಲ, ಅಷ್ಟು ಹೀನಾಯವಾಗಿದೆ ಎಂದೆಲ್ಲ ಬರೆದುಕೊಂಡಿದ್ದವು.
ಹೀಗೆ ತೆಲುಗು ಪೇಜ್‌ಗಳಿಂದ ಮಾತ್ರ ವ್ಯಕ್ತವಾದ ಈ ಪರಿ ಹಗೆತನವನ್ನು ಕಂಡು ಕನ್ನಡಿಗರು ಇದು ಪೂರ್ವ ನಿಯೋಜಿತ ಕೃತ್ಯ ಎಂದು ಕಿಡಿಕಾರಿದರು. ಒಂದೇ ಸಮಯಕ್ಕೆ ಹತ್ತಕ್ಕೂ ಹೆಚ್ಚು ದೊಡ್ಡ ಪೇಜ್‌ಗಳು ಈ ರೀತಿಯ ಟ್ವೀಟ್‌ಗಳನ್ನು ಹಂಚಿಕೊಂಡಿದ್ದು ಈ ಅನುಮಾನ ಮೂಡಲು ಕಾರಣವಾಗಿತ್ತು.
ಅಲ್ಲದೇ ಕೆಲ ತೆಲುಗು ಕಲಾವಿದರೂ ಸಹ ಪರೋಕ್ಷವಾಗಿ ಟಾಕ್ಸಿಕ್ ವಿರುದ್ಧ ಟ್ವೀಟ್ ಮಾಡಿದ್ದರು. ಇನ್ನು ಕೆಲ ತೆಲುಗು ನಟರು ತೆರೆ ಕಂಡು ಒಂದು ವಾರವಾದರೂ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದ ತೆಲುಗು ಸಿನಿಮಾವನ್ನು ಸರಿಯಾಗಿ ಟಾಕ್ಸಿಕ್ ಚಿತ್ರ ಬಿಡುಗಡೆಯಾದ ದಿನ ಹಾಡಿ ಹೊಗಳಿ ಟಾಕ್ಸಿಕ್ ವಿರುದ್ಧ ಪರೋಕ್ಷವಾಗಿ ದನಿ ಎತ್ತಿದರು.
ಈ ಸಾಲಿಗೆ ಕನ್ನಡಿಗರಿಂದ ಸದಾ ಟ್ರೋಲ್‌ಗೀಡಾದ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸಹ ಸೇರಿಕೊಂಡಿದ್ದು, ಇರುಮುಡಿ ಚಿತ್ರವನ್ನು ಹೊಗಳಿದ್ದಾರೆ. ನಿನ್ನೆ ಈ ಕುರಿತು ಇಬ್ಬರೂ ಟ್ವೀಟ್ ಮಾಡಿದ್ದು, ನಿನ್ನೆ ಇರುಮುಡಿ ಚಿತ್ರ ನೋಡಿದೆ ಎಂಥ ಅದ್ಭುತ ಚಿತ್ರ ಎಂದು ವಿಮರ್ಶೆ ಬರೆದುಕೊಂಡಿದ್ದಾರೆ.
ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಇರುಮುಡಿ ಬಿಡುಗಡೆಯಾಗಿ ಒಂದು ವಾರವಾದರೂ ಯಾವುದೇ ಟ್ವೀಟ್ ಮಾಡದಿದ್ದ ಇವರು ಸರಿಯಾಗಿ ಟಾಕ್ಸಿಕ್ ಬಿಡುಗಡೆಯಾದ ದಿನ ಆ ಚಿತ್ರವನ್ನು ಹೊಗಳಿರುವುದು ಟಾಕ್ಸಿಕ್ ವಿರುದ್ಧದ ಷಡ್ಯಂತ್ರ ಎಂದಿದ್ದಾರೆ.
ಇನ್ನು ಈ ಇಬ್ಬರು ಮಾತ್ರವಲ್ಲದೇ ತೆಲುಗಿನ ಹಲವಾರು ನಟ ಹಾಗೂ ನಟಿಯರು ಈ ರೀತಿ ಪೋಸ್ಟ್ ಹಂಚಿಕೊಂಡಿದ್ದು, ಹಿಂದಿನ ದಿನ ಇರುಮುಡಿ ಸೆಲೆಬ್ರಿಟಿ ಶೋ ನಡೆದಿದೆಯಾ ಅಥವಾ ಟಾಕ್ಸಿಕ್ ಅಲೆಯಲ್ಲಿ ಇರುಮುಡಿ ಕೊಚ್ಚಿ ಹೋಗದಿರಲಿ ಎಂದು ಈ ರೀತಿ ಚಿತ್ರತಂಡ ಟ್ವೀಟ್ ಮಾಡಿಸಿ ತಮ್ಮ ಸಿನಿಮಾ ಉಳಿಸಿಕೊಳ್ಳುವ ಕೆಲಸ ಮಾಡಿತಾ ಎಂಬ ಪ್ರಶ್ನೆ ಎದ್ದಿದೆ.