ಬೆಂಗಳೂರು: ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಗಣೇಶ ಮೆರವಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ನಡೆಸುತ್ತಿರುವ ಪ್ರತಿಭಟನೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ನೇರವಾಗಿ ಗುರಿಯಾಗಿಸಿ ಪೋಸ್ಟ್ ಮಾಡಿರುವ ಅವರು, ಬಿಜೆಪಿಯದ್ದು "ಸದಾರಮೆ ನಾಟಕ" ಹಾಗೂ "ಧರ್ಮ ರಾಜಕಾರಣ" ಎಂದು ಕಟುವಾಗಿ ಟೀಕಿಸಿದ್ದಾರೆ.
ಧರ್ಮ ರಾಜಕಾರಣದ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ
ಟಿ.ನರಸೀಪುರ ಘಟನೆಯನ್ನು ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, "ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅನುಮತಿ ನೀಡಿದ ರೂಟ್ ಮ್ಯಾಪ್ ಪ್ರಕಾರವೇ ಗಣಪತಿ ಮೆರವಣಿಗೆ ಸಾಗಬೇಕು ಎಂದು ಸೂಚಿಸಿದ್ದರು. ಆದರೆ, ಪೊಲೀಸರ ಈ ಸಾಮಾನ್ಯ ನಿರ್ದೇಶನವನ್ನೇ ನೆಪ ಮಾಡಿಕೊಂಡು ಬಿಜೆಪಿಗರು ಧರ್ಮ ರಾಜಕಾರಣದ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ವರ್ತಿಸುತ್ತಿದ್ದಾರೆ" ಎಂದು ಕುಟುಕಿದ್ದಾರೆ.
ಹಿಂದುತ್ವದ ವೇಷ ತೊಟ್ಟು ಸದಾರಮೆ ನಾಟಕ
ಪ್ರತಿಭಟನೆಗಾಗಿ ಟಿ.ನರಸೀಪುರಕ್ಕೆ ತೆರಳಿದ ಆರ್. ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, "ಪ್ರತಿಭಟನೆ ಎಂಬ ಸದಾರಮೆ ನಾಟಕ ಮಾಡಲು ಹಿಂದುತ್ವದ ವೇಷ ತೊಟ್ಟು ಟಿ. ನರಸೀಪುರಕ್ಕೆ ತೆರಳುತ್ತಿರುವ ಅಶೋಕ್ ಅವರೇ, ಹಿಂದೆ ನಿಮ್ಮದೇ ಬಾಯಿಂದ ಉದುರಿದ ಅಣಿಮುತ್ತುಗಳನ್ನು ಒಮ್ಮೆ ನೆನಪಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಿ. ನೀವೀಗ ಆರಂಭಿಸಿರುವ ಈ ಧರ್ಮ ರಾಜಕಾರಣ ದೊಡ್ಡ ನಾಯಕ ಎನಿಸಿಕೊಳ್ಳುವುದಕ್ಕೋ ಅಥವಾ ಅಭದ್ರತೆಯಲ್ಲಿರುವ ವಿಪಕ್ಷ ನಾಯಕನ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕೋ?" ಎಂದು ನೇರ ಪ್ರಶ್ನೆ ಹಾಕಿದ್ದಾರೆ.
ಪೊಲೀಸರ ಮೇಲಿನ ದರ್ಪ ಸಹಿಸಲ್ಲ: ಖಡಕ್ ಎಚ್ಚರಿಕೆ
ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿರುವ ಪ್ರಿಯಾಂಕ್ ಖರ್ಗೆ, "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಹಾಗೂ ಕೋಮು ಸಂಘರ್ಷವನ್ನು ಹತ್ತಿಕ್ಕುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕರ್ತವ್ಯದಲ್ಲಿರುವ ಪೊಲೀಸರ ಮೇಲೆ ನಿಮ್ಮ ದರ್ಪ ಮತ್ತು ದೌರ್ಜನ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ" ಎಂದು ಆರ್. ಅಶೋಕ್ ಮತ್ತು ಬಿಜೆಪಿ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
https://twitter.com/PriyankKharge/status/2099036983997956473