ನಟ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಅನಾರೋಗ್ಯದ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 13ರಿಂದ ಹೊರಬಂದಿದ್ದಾರೆ. ಸೆಪ್ಟೆಂಬರ್ 14ರ ಸಂಜೆ ಅವರ ಆರೋಗ್ಯದ ಬಗ್ಗೆ ಹಲವು ಸುದ್ದಿಗಳು ಹರಿದಾಡಿದ್ದವು. ಇದೀಗ ಕಲರ್ಸ್ ಕನ್ನಡ ವಾಹಿನಿ ಓಂ ಪ್ರಕಾಶ್ ರಾವ್ ಅವರು ಶೋನಿಂದ ಹೊರಬಂದಿರುವುದನ್ನು ಅಧಿಕೃತವಾಗಿ ಘೋಷಿಸಿದೆ.
ಬಿಗ್ ಬಾಸ್ ಮನೆಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಓಂ ಪ್ರಕಾಶ್ ರಾವ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಕಾಲು ನೋವು ಹಾಗೂ ಊತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಚಿಕಿತ್ಸೆ ಪಡೆದು ಮತ್ತೆ ಬಿಗ್ ಬಾಸ್ ಮನೆಗೆ ಮರಳುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಆರೋಗ್ಯದ ದೃಷ್ಟಿಯಿಂದ ಅವರು ಕಾರ್ಯಕ್ರಮದಿಂದ ಹೊರಬರುವ ನಿರ್ಧಾರ ಮಾಡಿದ್ದಾರೆ.
ಫ್ಲೈಟ್ ಟಾಸ್ಕ್ ಬಳಿಕ ಆರೋಗ್ಯದಲ್ಲಿ ಸಮಸ್ಯೆ
ಈ ಬಾರಿ ಬಿಗ್ ಬಾಸ್ ಮನೆಯಲ್ಲಿನ ಫ್ಲೈಟ್ ಟಾಸ್ಕ್ ಕೂಡ ಓಂ ಪ್ರಕಾಶ್ ರಾವ್ ಅವರಿಗೆ ಸವಾಲಾಗಿತ್ತು. ಮನೆಯೊಳಗಿನ ಕಿರಿದಾದ ಜಾಗದಲ್ಲಿ ಉಳಿಯುವುದು ಅವರಿಗೆ ಕಷ್ಟವಾಗಿತ್ತು. ನಿರಂತರವಾಗಿ ಅಲ್ಲಿ ಇರುವುದರಿಂದ ಕಾಲಿನಲ್ಲಿ ಊತ ಮತ್ತು ನೋವು ಕಾಣಿಸಿಕೊಂಡಿತ್ತು.
ಇದರ ನಡುವೆ ಫುಡ್ ಟಾಸ್ಕ್‌ನಲ್ಲಿ ಹೆಚ್ಚು ಖಾರ ಹಾಗೂ ಉಪ್ಪು ಇರುವ ಪದಾರ್ಥಗಳನ್ನು ಸೇವಿಸಿದ್ದರಿಂದ ಅವರಿಗೆ ವಾಂತಿ ಕೂಡ ಆಗಿತ್ತು. ಬಳಿಕ ಹೊಟ್ಟೆಯ ಸಮಸ್ಯೆಯೂ ಕಾಣಿಸಿಕೊಂಡಿತ್ತು.
ಆಸ್ಪತ್ರೆಗೆ ದಾಖಲಿಸಿದ್ದ ಬಿಗ್ ಬಾಸ್ ತಂಡ
ಪ್ರಥಮಾ ಪ್ರಸಾದ್ ಎಲಿಮಿನೇಟ್ ಆದ ಬಳಿಕ ಸ್ಪರ್ಧಿಗಳು ಮತ್ತೆ ಬಿಗ್ ಬಾಸ್ ಮನೆಗೆ ಮರಳಿದ್ದರು. ಆದರೆ ಓಂ ಪ್ರಕಾಶ್ ರಾವ್ ಅವರಿಗೆ ಒಂದು ದಿನದಲ್ಲೇ ಆರೋಗ್ಯ ಸಮಸ್ಯೆ ಎದುರಾಗಿದೆ. ತಕ್ಷಣವೇ ಬಿಗ್ ಬಾಸ್ ತಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿತ್ತು.
ಈ ಹಿಂದೆ ಕೂಡ ಕೆಲ ಸ್ಪರ್ಧಿಗಳು ಅನಾರೋಗ್ಯದ ಕಾರಣ ಬಿಗ್ ಬಾಸ್ ಮನೆಯಿಂದ ತಾತ್ಕಾಲಿಕವಾಗಿ ಹೊರಬಂದು ಚಿಕಿತ್ಸೆ ಪಡೆದು ಮತ್ತೆ ಕಾರ್ಯಕ್ರಮಕ್ಕೆ ಮರಳಿದ್ದರು. ಆದರೆ ಓಂ ಪ್ರಕಾಶ್ ರಾವ್ ಅವರ ವಿಚಾರದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅವರು ಕಾರ್ಯಕ್ರಮಕ್ಕೆ ಮರಳದಿರಲು ನಿರ್ಧರಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಓಂ ಪ್ರಕಾಶ್ ರಾವ್ ಅವರು ಹೆಚ್ಚು ಸಮಯ ಕಾಣಿಸಿಕೊಂಡಿರಲಿಲ್ಲ. ಆದರೂ ಕಿರಿಯ ಸ್ಪರ್ಧಿಗಳೊಂದಿಗೆ ಮಾತನಾಡುತ್ತಾ, ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದರು.ಇದೀಗ ಅವರು ಕಾರ್ಯಕ್ರಮದಿಂದ ಹೊರಬಂದಿರುವುದು ಸಹ ಸ್ಪರ್ಧಿಗಳಿಗೆ ಹಾಗೂ ಬಿಗ್ ಬಾಸ್ ವೀಕ್ಷಕರಿಗೆ ಬೇಸರ ಮೂಡಿಸಿದೆ.