ವಿಜಯನಗರ (ಹೊಸಪೇಟೆ): ಗಣೇಶ ಮೂರ್ತಿಯನ್ನು ಸಾಗಿಸುತ್ತಿದ್ದ ವೇಳೆ ತಂತಿಗೆ ಬಿದಿರು ತಗುಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಇಬ್ಬರು ಗಾಯಗೊಂಡಿರುವ ದುರ್ಘಟನೆ ಹೊಸಪೇಟೆ ನಗರದ ಅನಂತಶಯನಗುಡಿ ಹೊರವಲಯದಲ್ಲಿ ಸೋಮವಾರ ನಡೆದಿದೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದ್ದು, ವಿದ್ಯುತ್ ಪ್ರವಹಿಸಿದರೂ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಮಲಾಪುರ ಮೂಲದ ಹುಲುಗಪ್ಪ ಹಾಗೂ ದೀಪಕ್ ವಿದ್ಯುತ್ ಆಘಾತಕ್ಕೊಳಗಾದ ಗಾಯಾಳುಗಳು. ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದಾಗ ಮೂರ್ತಿಗೆ ಭದ್ರತೆಗಾಗಿ ಅಳವಡಿಸಲಾಗಿದ್ದ ಬಿದಿರು, ರಸ್ತೆಯ ಮೇಲಿದ್ದ ವಿದ್ಯುತ್ ಕಂಬದ ತಂತಿಗೆ ಸ್ಪರ್ಶಿಸಿದೆ. ಇದರಿಂದಾಗಿ ತಕ್ಷಣವೇ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ನಿಯಂತ್ರಣ ಸಿಗದೆ ಟ್ರ್ಯಾಕ್ಟರ್ ಹಾಗೂ ಗಣೇಶ ಮೂರ್ತಿ ಪಕ್ಕದಲ್ಲಿದ್ದ ಕಾಲುವೆಗೆ ಉರುಳಿ ಬಿದ್ದಿವೆ.
ಘಟನೆಯಲ್ಲಿ ಗಾಯಗೊಂಡ ಹುಲುಗಪ್ಪ ಮತ್ತು ದೀಪಕ್ ಅವರನ್ನು ತಕ್ಷಣವೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ತದನಂತರ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಗಾಯಾಳುಗಳನ್ನು ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.