‘ಬಿಗ್ ಬಾಸ್ ಕನ್ನಡ 13’ರಲ್ಲಿ ತಾಂಡವ್ ರಾಮ್ ಅವರ ಮಿಡ್‌ವೀಕ್ ಎಲಿಮಿನೇಷನ್ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಕಡಿಮೆ ವೋಟ್ ಬಂದು ಅವರು ಮನೆಯಿಂದ ಹೊರಗೆ ಬಂದಿರಲಿಲ್ಲ. ಟಾಸ್ಕ್‌ನಲ್ಲಿ ಸಿಕ್ಕ ಅವಕಾಶದಂತೆ ಅವರ ಶೇ.50ರಷ್ಟು ವೋಟ್‌ಗಳನ್ನು ಧನುಷ್ ಕಸಿದುಕೊಂಡಿದ್ದರು. ಇದಾದ ಬಳಿಕ ತಾಂಡವ್ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಮನೆಯಿಂದ ಹೊರಬಂದಿದ್ದರು.
ತಾಂಡವ್ ಹೊರಬಂದ ಬೆನ್ನಲ್ಲೇ ವೀಕ್ಷಕರಿಂದ ಅಸಮಾಧಾನ ವ್ಯಕ್ತವಾಗಿತ್ತು. ‘ನಾವು ಹಾಕಿದ ವೋಟ್‌ಗಳನ್ನು ಬೇರೆ ಸ್ಪರ್ಧಿಗಳು ಹೇಗೆ ಕಸಿದುಕೊಳ್ಳುತ್ತಾರೆ?’, ತಾಂಡವ್ ಎಲಿಮಿನೇಷನ್ ಸರಿಯಲ್ಲ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲೂ ನಡೆದಿತ್ತು. ಇದೀಗ ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ, ತಾಂಡವ್ ಮತ್ತೆ ಬಿಗ್ ಬಾಸ್ ಮನೆಗೆ ಮರಳಿದ್ದಾರೆ.
ಸುದೀಪ್ ಮುಂದೆ ಬಂದ ತಾಂಡವ್
ಎಮರ್ಜೆನ್ಸಿ ಎಕ್ಸಿಟ್ ಬಳಿಕ ತಾಂಡವ್ ಸುದೀಪ್ ಮುಂದೆ ವೇದಿಕೆಗೆ ಬಂದರು. ‘50 ಪರ್ಸೆಂಟ್ ವೋಟ್ ಕಸಿದುಕೊಳ್ಳಬೇಕು ಎಂದಾಗ ಧನುಷ್ ನನ್ನ ವೋಟ್ ತಗೊಂಡರು ಸರ್. ಅದಕ್ಕೆ ಇಲ್ಲಿದ್ದೇನೆ’ ಎಂದು ಹೇಳಿದರು.
ಇದಕ್ಕೆ ಸುದೀಪ್, ‘ಆ ಸಮಯದಲ್ಲಿ ನಿಮ್ಮ ರಿಯಾಕ್ಷನ್ ನಿಜವಾಗಿಯೂ ವೆಲ್ ಬಿಹೇವ್ಡ್ ಆಗಿತ್ತು’ ಎಂದು ತಾಂಡವ್ ಅವರನ್ನು ಮೆಚ್ಚಿಕೊಂಡರು. ಇದನ್ನು ಕೇಳಿ ತಾಂಡವ್ ಕೂಡ ಖುಷಿಪಟ್ಟರು.
https://x.com/ColorsKannada/status/2103816623723597857
ಆಮೇಲೆ ತಾಂಡವ್ ಅವರ ಜರ್ನಿ ವಿಟಿ ನೋಡಲು ಸುದೀಪ್ ಸೂಚಿಸಿದರು. ಆದರೆ ವಿಡಿಯೋ ಸರಿಯಾಗಿ ಪ್ಲೇ ಆಗಲಿಲ್ಲ. ಆಗ ಸುದೀಪ್ ‘ಏನಾಯ್ತು ಬಿಗ್ ಬಾಸ್?’ ಎಂದು ಕೇಳಿದರು. ನಂತರ ‘ಇದರ ಅರ್ಥ ನಿಮ್ಮ ಜರ್ನಿ ಇನ್ನೂ ಕಂಪ್ಲೀಟ್ ಆಗಿಲ್ಲ ಅಂತ’ ಎಂದು ಹೇಳಿ ತಾಂಡವ್‌ಗೆ ಸರ್ಪ್ರೈಸ್ ನೀಡಿದರು.
ತಾಂಡವ್ ತಮ್ಮ ಎಲಿಮಿನೇಷನ್ ಬಗ್ಗೆ ಸುದೀಪ್ ಬಳಿ ಪ್ರಶ್ನೆ ಮಾಡಿದರು. ‘ಬಿಗ್ ಬಾಸ್ ಈ ಆಟ ಇಟ್ಟಿರಲಿಲ್ಲ ಅಂದಿದ್ದರೆ ಯಾರು ವೋಟ್‌ಗಳನ್ನು ಕಿತ್ತುಕೊಳ್ಳುತ್ತಿದ್ದರು?’ ಎಂದು ಕೇಳಿದರು.
ಇದಕ್ಕೆ ಸುದೀಪ್, ‘ವೀಕ್ಷಕರು ಕೇಳುತ್ತಿದ್ದರು, ನಾವ್ಯಾಕೆ ವೋಟ್ ಹಾಕಬೇಕು ಅಂತ. ವೀಕ್ಷಕರ ವೋಟಿಂಗ್ ಬಂದ ಮೇಲೆ ಅವರ ವೋಟ್‌ಗಳ ಬಗ್ಗೆ ಆಟವಾಡುವ ಅಧಿಕಾರ ನಮಗಿಲ್ಲ’ ಎಂದು ಹೇಳಿದರು.
‘50-50 ಯಾಕೆ ಇಟ್ಟಿದ್ದೇವೆ ಅಂದರೆ ಮನೆಯೊಳಗಿನ ಸ್ಪರ್ಧಿಗಳ ಆಯ್ಕೆ ಏನು, ಅವರು ಕೊಡುವ ಕಾರಣಗಳು ಏನು ಅನ್ನೋದನ್ನ ತಿಳಿದುಕೊಳ್ಳಲು. ಕಾರಣ ಇಲ್ಲದೆ ಏನೂ ನಡೆಯಲ್ಲ. ಜನ ವೋಟ್ ಹಾಕಿ ಉಳಿಸಿಕೊಳ್ಳಬೇಕಾದರೆ ವೀಕ್ಷಕರ ವಿರುದ್ಧ ಹೋಗುವ ಅಧಿಕಾರ ನಮಗೆ ಇಲ್ಲ. ನಾವು ಅದನ್ನ ಮಾಡಲ್ಲ’ ಎಂದು ಸುದೀಪ್ ಸ್ಪಷ್ಟಪಡಿಸಿದರು.
ತಾಂಡವ್ ಅವರ ವೋಟ್ ಕಸಿದುಕೊಂಡಿರುವುದರಿಂದಲೇ ಅವರ ಎಲಿಮಿನೇಷನ್ ಆಗಿದೆ ಎಂಬ ಗೊಂದಲದ ಬಗ್ಗೆಯೂ ಸುದೀಪ್ ಮಾತನಾಡಿದರು. ‘ನಿಮ್ಮ ವೋಟ್‌ಗೆ ಅನ್ಯಾಯ ಆಗಿಲ್ಲ. ನಿಮ್ಮ ವೋಟ್ ಪ್ರಕಾರ ಯಾರ್ಯಾರು ಹೋಗಬೇಕಿತ್ತೋ ಅವರೇ ಹೋಗುತ್ತಿದ್ದಾರೆ’ ಎಂದು ಹೇಳಿದರು.
ಇದೇ ವೇಳೆ ತಾಂಡವ್‌ರನ್ನು ಸ್ವಲ್ಪ ತಮಾಷೆಯಾಗಿ ಕಿವಿ ಹಿಂಡಿ ಬುದ್ಧಿವಾದವನ್ನೂ ನೀಡಿದರು. ಕಳೆದ ವಾರದ ಮಾತನ್ನು ನೆನಪಿಸಿಕೊಳ್ಳುವಂತೆ ಕೇಳಿದಾಗ ತಾಂಡವ್ ‘ಕೋ-ವಿಐಪಿ ಆಗಬೇಡಿ ಅಂತ ಹೇಳಿದ್ರಿ’ ಎಂದರು. ಆಗ ಸುದೀಪ್ ‘ವಿಸ್ಪರ್ ಮಾಡುವ ಹಾಗಿಲ್ಲ ಅಂತ ಹೇಳಿದ್ದೆ’ ಎಂದು ನೆನಪಿಸಿದರು.
ಕಿರಣ್ ಅವರ ಕಿವಿಯಲ್ಲಿ ಏನು ಹೇಳಿದ್ದೀರಿ ಎಂಬುದನ್ನೂ ಸುದೀಪ್ ಪ್ರಶ್ನಿಸಿದರು. ‘ಅವರಿಗೆ ಆಟ ಆಡೋಕೆ ಬಿಡಬೇಕು ತಾನೆ? ಒಬ್ಬರಿಗೆ ಹೇಳಿಕೊಡೋದು ತಪ್ಪು’ ಎಂದು ತಾಂಡವ್‌ಗೆ ತಿಳಿಸಿದರು.ಇದಾದ ಬಳಿಕ ತಾಂಡವ್ ತಮ್ಮ ಬಿಗ್ ಬಾಸ್ ಜರ್ನಿಯಿಂದ ಕಲಿತಿದ್ದೇನು ಎಂಬುದನ್ನು ಹೇಳಿದರು.
‘ತುಂಬಾ ಪ್ರಾಂಪ್ಟ್ ಆಗಿರಬೇಕು ಅಂತ ಅರ್ಥವಾಯಿತು. ನಿಜ ವ್ಯಕ್ತಿತ್ವ ಆಚೆ ಬರುತ್ತದೆ. ನಾವು ನಾವಾಗಿರಬೇಕು ಅನ್ನೋದು ಅರ್ಥವಾಯಿತು’ ಎಂದರು.ಅದಕ್ಕೆ ಸುದೀಪ್ ‘ಸ್ನೇಹ ಇರಲಿ.. ಆಟ ಮೊದಲಿರಲಿ’ ಎಂದು ಸಲಹೆ ನೀಡಿದರು.
ತಾಂಡವ್ ಮತ್ತೆ ಮನೆಯೊಳಗೆ ಹೋದರೆ ಯಾರಿಗೆ ಬೇಜಾರಾಗಬಹುದು ಎಂದು ಸುದೀಪ್ ಕೇಳಿದಾಗ, ಮಂಜ, ಲಿಖಿತ್, ಅವಿನಾಶ್ ಮತ್ತು ಯಶಸ್ ಅವರ ಹೆಸರುಗಳನ್ನು ತಾಂಡವ್ ಹೇಳಿದರು. ತಾವು ಹೊರಗೆ ಬರುವಾಗ ಏಳು ಜನ ಕಣ್ಣೀರು ಹಾಕಿದ್ದರು ಎಂದೂ ಅವರು ಹೇಳಿದರು.
ತಾಂಡವ್ ಅವರ ಜರ್ನಿ ವಿಟಿ ಪ್ಲೇ ಆಗದೇ ಇದ್ದದ್ದು ಕೂಡ ಅವರು ಮತ್ತೆ ಮನೆಗೆ ಹೋಗುವ ಸುಳಿವು ನೀಡಿತ್ತು. ಇದೀಗ ಸುದೀಪ್ ಅವರ ಮಾತಿನಲ್ಲೂ ಅದು ಸ್ಪಷ್ಟವಾಗಿದೆ. ತಾಂಡವ್ ಮತ್ತೆ ಬಿಗ್ ಬಾಸ್ ಮನೆಗೆ ಮರಳಿದ್ದಾರೆ.
ಈ ನಡುವೆ ಮುಂದಿನ ಸಂಚಿಕೆಯಲ್ಲಿ ಮೂವರು ಹೊಸ ವೈಲ್ಡ್‌ಕಾರ್ಡ್ ಸ್ಪರ್ಧಿಗಳು ಮನೆಗೆ ಬರಲಿದ್ದಾರೆ ಎಂಬ ಸುಳಿವನ್ನೂ ಸುದೀಪ್ ನೀಡಿದ್ದಾರೆ.
‘ಮುಂದಿನ ಸಂಚಿಕೆಯಲ್ಲಿ ನ್ಯೂ ಅರೈವಲ್ ಇದೆ. ನ್ಯೂ ವೈಲ್ಡ್‌ಕಾರ್ಡ್ ಎಂಟ್ರಿ ಕಾದಿದೆ. ಒಂದಲ್ಲ, ಎರಡಲ್ಲ, ಮೂರು ಜನ ಒಳಗೆ ಹೋಗುತ್ತಿದ್ದಾರೆ. ಗೇಮ್ ಇನ್ಮೇಲೆ ಬಿಸಿ ಆಗುತ್ತೆ’ ಎಂದು ಸುದೀಪ್ ಹೇಳಿದ್ದಾರೆ.
ಹೀಗಾಗಿ ತಾಂಡವ್ ಅವರ ಎಮರ್ಜೆನ್ಸಿ ಎಕ್ಸಿಟ್‌ನಿಂದ ಶುರುವಾದ ಗೊಂದಲಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಮಧ್ಯದಲ್ಲಿ ಮನೆಯಿಂದ ಹೊರಬಂದಿದ್ದ ತಾಂಡವ್ ಮತ್ತೆ ಆಟಕ್ಕೆ ಮರಳಿದ್ದು, ಮುಂದಿನ ದಿನಗಳಲ್ಲಿ ಅವರ ಆಟ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.