ಮಗಳ ದಿನಾಚರಣೆಯ ಸಂದರ್ಭದಲ್ಲಿ ಬಾಲಿವುಡ್ ನಟಿ ಕೃತಿ ಸನೋನ್ ಅವರು ಹೆಣ್ಣುಮಕ್ಕಳ ಭದ್ರತೆ ಮತ್ತು ಅವರು ಪ್ರತಿದಿನ ಎದುರಿಸುತ್ತಿರುವ ಭಯದ ವಾತಾವರಣದ ಕುರಿತು ಅತ್ಯಂತ ಗಂಭೀರ ಹಾಗೂ ಚಿಂತನಾರ್ಹ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಬರೆದುಕೊಂಡಿರುವ ಕೃತಿ, ಹೆಣ್ಣುಮಕ್ಕಳು ರಾತ್ರಿ ವೇಳೆ ಏಕಾಂಗಿಯಾಗಿ ನಡೆದುಕೊಂಡು ಹೋಗುವಾಗ ಅನುಭವಿಸುವ ಆತಂಕ, ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಭಯ ಮತ್ತು ಫೋನ್ ಬ್ಯಾಟರಿ ಖಾಲಿಯಾದರೆ ಉಂಟಾಗುವ ಗಾಬರಿಯನ್ನು ಪ್ರತಿಯೊಬ್ಬ ಪೋಷಕರೂ ಒಮ್ಮೆ ಕಲ್ಪಿಸಿಕೊಂಡು ನೋಡಿ ಎಂದು ಹೇಳಿದ್ದಾರೆ. ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳು ಲೈವ್ ಲೊಕೇಶನ್ ಹಂಚಿಕೊಳ್ಳುವುದು, ಪೆಪ್ಪರ್ ಸ್ಪ್ರೇ ಜೊತೆಯಲ್ಲಿಟ್ಟುಕೊಳ್ಳುವುದು ಹಾಗೂ ಕ್ಯಾಬ್‌ಗಳಲ್ಲಿ ಪ್ರಯಾಣಿಸುವಾಗ ಫೋನ್‌ನಲ್ಲಿ ಮಾತನಾಡುತ್ತಲೇ ಇರುವುದು ದೈನಂದಿನ ದಿನಚರಿಯ ಭಾಗವಾಗಿ ಹೋಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಯಾವಾಗ ಒಬ್ಬ ಮಗಳು ರಾತ್ರಿ ವೇಳೆಯಲ್ಲಿ ಯಾವುದೇ ಭಯವಿಲ್ಲದೆ ರಸ್ತೆಯಲ್ಲಿ ಓಡಾಡಲು, ಉದ್ಯಾನವನದಲ್ಲಿ ಕುಳಿತುಕೊಳ್ಳಲು ಮತ್ತು ತನಗೆ ಇಷ್ಟ ಬಂದ ಬಟ್ಟೆ ಧರಿಸಿ ಸಾರ್ವಜನಿಕ ಸಾರಿಗೆಯಲ್ಲಿ ಧೈರ್ಯವಾಗಿ ಸಂಚರಿಸಲು ಸಾಧ್ಯವಾಗುತ್ತದೆಯೋ, ಅಂದು ಮಾತ್ರ ನಿಜವಾದ ಮಗಳ ದಿನಾಚರಣೆಯನ್ನು ಆಚರಿಸಲು ಸಾಧ್ಯ ಎಂದು ಕೃತಿ ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಯೊಬ್ಬ ಹೆಣ್ಣುಮಗಳು ಮನೆಗೆ ತಲುಪಿದ ತಕ್ಷಣ ‘ನಾನು ಸುರಕ್ಷಿತವಾಗಿ ಬಂದಿದ್ದೇನೆ’ ಎಂದು ಕರೆ ಮಾಡಿ ಹೇಳುವ ಪರಿಸ್ಥಿತಿ ಬದಲಾಗಬೇಕು. ಯಾವುದೇ ಭೀತಿಯಿಲ್ಲದೆ ಮಹಿಳೆಯರು ಬದುಕುವಂತಹ ವಾತಾವರಣವನ್ನು ನಿರ್ಮಿಸಿಕೊಡುವುದೇ ನಾವು ಅವರಿಗೆ ನೀಡುವ ನಿಜವಾದ ಗೌರವ ಎಂದು ಕೃತಿ ಸನೋನ್ ಕರೆ ನೀಡಿದ್ದಾರೆ.