LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಗರವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿಪಡಿಸುವುದೇ ನನ್ನ ಸಂಕಲ್ಪ: ಶಾಸಕ ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ: ಪ್ರವಾಸೋದ್ಯಮ ನಗರವಾಗಿ ಬೆಳೆಯುತ್ತಿರುವ ಸಾಗರವನ್ನು ಸ್ವಚ್ಛ, ಸುಂದರ ಹಾಗೂ ಮಾದರಿ ನಗರವನ್ನಾಗಿ ಪರಿವರ್ತಿಸಲು ಹಲವು ಜನಪರ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಿಳಿಸಿದರು.

​ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ನೂತನ ಫುಡ್ ಕೋರ್ಟ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾನುಡಿದರು..

news_1790611465_1_145.webp

​ನಗರದಲ್ಲಿ 4 ಕಡೆ ಸುಸಜ್ಜಿತ ಫುಡ್ ಕೋರ್ಟ್‌ಗಳು

​ಜೋಗ ಹಾಗೂ ಸಿಗಂದೂರಿಗೆ ಬರುವ ಲಕ್ಷಾಂತರ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಉತ್ತಮ, ಸ್ವಚ್ಛ ಆಹಾರ ಮತ್ತು ವ್ಯಾಪಾರಿಗಳಿಗೆ ನೆಲೆ ಕಲ್ಪಿಸಲು ನಗರದಲ್ಲಿ ಒಟ್ಟು 4 ಫುಡ್ ಕೋರ್ಟ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.

  1. ​ಮೊದಲ ಫುಡ್ ಕೋರ್ಟ್: ತಾಯಿ-ಮಕ್ಕಳ ಆಸ್ಪತ್ರೆ ಮುಂಭಾಗ ಸುಮಾರು 20 ಅಂಗಡಿಗಳಿರುವ ಫುಡ್ ಕೋರ್ಟ್ ಸಿದ್ಧಗೊಂಡಿದ್ದು, ಇನ್ನು 15-20 ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಹೆದ್ದಾರಿ ಅಗಲೀಕರಣದ ವೇಳೆ ಅಂಗಡಿ ಕಳೆದುಕೊಂಡ ವ್ಯಾಪಾರಿಗಳಿಗೆ ಇಲ್ಲಿ ಪುನರ್ವಸತಿ ಕಲ್ಪಿಸಲಾಗುವುದು.
  2. ​ಎರಡನೇ ಫುಡ್ ಕೋರ್ಟ್: ಹಳೆ ಬಸ್ ನಿಲ್ದಾಣದ ಖಾಲಿ ಜಾಗದಲ್ಲಿ ಮಾರಿಕಾಂಬಾ ದೇವಸ್ಥಾನ ಸಮಿತಿಯ ನಾಗರಾಜ್ ಅವರ ಸಹಕಾರದೊಂದಿಗೆ ಸುಮಾರು 20 ರಿಂದ 26 ಅಂಗಡಿಗಳ ಸುಸಜ್ಜಿತ ಫುಡ್ ಕೋರ್ಟ್, ಶೌಚಾಲಯ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ಮಾಡಲಾಗಿದೆ.
  3. ಮೂರನೇ ಫುಡ್ ಕೋರ್ಟ್: ಶಾಶ್ವತ ಧ್ವಜಸ್ತಂಭದ ಬಳಿ 25 ಅಂಗಡಿಗಳ ಸಾಮರ್ಥ್ಯದ ಫುಡ್ ಕೋರ್ಟ್ ನಿರ್ಮಾಣಗೊಳ್ಳಲಿದೆ.
  4. ನಾಲ್ಕನೇ ಫುಡ್ ಕೋರ್ಟ್: ಸೊರಬ ರಸ್ತೆಯಲ್ಲಿ ಜಾಗ ಗುರುತಿಸಿ ಮತ್ತೊಂದು ಫುಡ್ ಕೋರ್ಟ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ.

​news_1790611466_4_777.webp

ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

​ಕಾರ್ಯಕ್ರಮದಲ್ಲಿ ವಿವಿಧ ಸೌಲಭ್ಯಗಳ ವಿತರಣೆಯನ್ನು ಪ್ರಸ್ತಾಪಿಸಿದ ಅವರು, ನಲ-ಜಲ-ಮಿತ್ರ ಯೋಜನೆಯಡಿ 4 ಕೆರೆಗಳಿಗೆ ಮೀನು ಬಿಡುವ ವ್ಯವಸ್ಥೆ, ಮನೆ ಕಳೆದುಕೊಂಡವರಿಗೆ ಮನೆ ದುರಸ್ತಿ ನೆರವು, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಶೌಚಾಲಯ ನಿರ್ಮಾಣಕ್ಕೆ ಸಹಾಯಧನ, ವಿಕಲಚೇತನರು ಹಾಗೂ ಅಟೋ ಚಾಲಕರಿಗೆ 10 ತ್ರಿಚಕ್ರ ವಾಹನಗಳ ವಿತರಣೆ ಮತ್ತು ಸ್ವಯಂ ಉದ್ಯೋಗಕ್ಕಾಗಿ ₹50,000 ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು. ಆರೋಗ್ಯ ವ್ಯತ್ಯಾಸವಾದ ಬಡವರಿಗೆ ಡಿಸಿ ಅವರೊಂದಿಗೆ ಚರ್ಚಿಸಿ ಪರಿಹಾರ ಕೊಡಿಸಲಾಗಿದೆ. ಮನೆ ಹಾನಿಯಾದವರಿಗೆ ವೈಯಕ್ತಿಕವಾಗಿಯೂ ಮತ್ತು ನಗರಸಭೆಯಿಂದ ತಕ್ಷಣ ₹20,000 ಬಿಡುಗಡೆ ಮಾಡಿಸಿದ್ದು, ಸರ್ಕಾರದ ಪರಿಹಾರವೂ ತಲುಪಲಿದೆ ಎಂದು ತಿಳಿಸಿದರು.

​ನಗರಸಭೆಗೆ ₹50 ಕೋಟಿ ವಿಶೇಷ ಅನುದಾನ

​ನೂತನ ನಗರಾಭಿವೃದ್ಧಿ ಯೋಜನೆಗಳಡಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಗರಸಭೆಗೆ ₹50 ಕೋಟಿ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ₹20 ಲಕ್ಷ ವಿಶೇಷ ಅನುದಾನ ಬಿಡುಗಡೆ ಮಾಡಲು ಸೂಚಿಸಿದ್ದು, ಪಟ್ಟಿ ಸಿದ್ಧಪಡಿಸಲಾಗಿದೆ. ಈ ಹಣವನ್ನು ರಸ್ತೆ, ಚರಂಡಿ ಮತ್ತು ಸೇತುವೆ ಅಭಿವೃದ್ಧಿಗೆ ಮಾತ್ರ ಬಳಸಲು ಅವಕಾಶವಿದೆ. ಇದಲ್ಲದೆ ಉಳಿತಾಯವಾಗಿರುವ ಸುಮಾರು ₹3 ಕೋಟಿ ವೆಚ್ಚದಲ್ಲಿ ಹಿಂದೆ ಮಾಡಲಾಗಿದ್ದ ಉದ್ಯಾನವನಗಳನ್ನು ಮಕ್ಕಳ ಮತ್ತು ಹಿರಿಯರ ಅನುಕೂಲಕ್ಕೆ ತಕ್ಕಂತೆ ಪುನರುಜ್ಜೀವನಗೊಳಿಸಲಾಗುವುದು ಎಂದರು.

news_1790611465_2_466.webp

​ನಗರದಲ್ಲಿ ಹೈಟೆಕ್ ಪಾರ್ಕ್‌ಗಳ ನಿರ್ಮಾಣ

  • ​ಧ್ವಜಸ್ತಂಭದ ಬಳಿ ಹೈಟೆಕ್ ಪಾರ್ಕ್: ಬೆಂಗಳೂರಿನ ಮಾದರಿಯಲ್ಲಿ ₹3 ಕೋಟಿ ವೆಚ್ಚದಲ್ಲಿ ವಾಕಿಂಗ್ ಪಾತ್, ಜಿಮ್, ಫುಡ್ ಕೋರ್ಟ್, ಮಕ್ಕಳ ಆಟಿಕೆಗಳು ಹಾಗೂ ಸಾಂಸ್ಕೃತಿಕ ತಂಡಗಳಿಗಾಗಿ ಮುಕ್ತ ರಂಗಮಂದಿರ (ಓಪನ್ ಥಿಯೇಟರ್) ಮತ್ತು ಕಾರಂಜಿ ಒಳಗೊಂಡ ಬೃಹತ್ ಪಾರ್ಕ್ ನಿರ್ಮಿಸಲು ಪ್ಲಾನ್ ರೆಡಿಯಾಗಿದೆ.
  • ​ಐವಿ ಕೆಳಭಾಗದ ಪಾರ್ಕ್: ಐವಿ ಕಚೇರಿ ಕೆಳಭಾಗದಲ್ಲಿ ಸುಮಾರು ₹1.30 ಕೋಟಿ - ₹1.40 ಕೋಟಿ ವೆಚ್ಚದಲ್ಲಿ ಜಿಮ್ ಹಾಗೂ ಆಟಿಕೆಗಳಿರುವ ಸುಂದರ ಪಾರ್ಕ್ ನಿರ್ಮಾಣವಾಗಲಿದೆ.
  • ​ನೆಹರೂ ಮೈದಾನ: ವಾಕಿಂಗ್ ಮಾಡುವವರಿಗಾಗಿ ನೆಹರೂ ಮೈದಾನದಲ್ಲಿ ರಾತ್ರಿ 10 ಗಂಟೆಯವರೆಗೂ ಓಡಾಡಲು ಬೆಳಕಿನ ವ್ಯವಸ್ಥೆ, ಮಳೆ ಬಂದರೆ ನಿಲ್ಲಲು ಶೆಡ್, ವಾಲಿಬಾಲ್ ಕೋರ್ಟ್‌ಗೆ ಪ್ರತ್ಯೇಕ ಫೆನ್ಸಿಂಗ್, ರಂಗಮಂದಿರ ಹಾಗೂ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ.

​news_1790611468_8_356.webp

ಪ್ರಮುಖ ಯೋಜನೆಗಳು ಮತ್ತು ಕಟ್ಟಡಗಳು

  • ​ಇಂಡೋರ್ ಸ್ಟೇಡಿಯಂ (ರವೀಂದ್ರನಾಥ ಟ್ಯಾಗೋರ್ ರಂಗಮಂದಿರ): ಪ್ರಶಾಂತ್ ಕಲ್ಯಾಣ ಮಂಟಪದ ಕೆಳಭಾಗದಲ್ಲಿ ₹5 ಕೋಟಿ ವೆಚ್ಚದಲ್ಲಿ ಸುಮಾರು 1,000 ಆಸನಗಳ ಸಾಮರ್ಥ್ಯದ ಕ್ರೀಡಾ ಮತ್ತು ಸಾಂಸ್ಕೃತಿಕ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ.
  • ​ಉಪನೋಂದಣಾಧಿಕಾರಿ (ಸಬ್-ರಿಜಿಸ್ಟ್ರಾರ್) ಕಚೇರಿ: ಹಿರಿಯ ನಾಗರಿಕರಿಗೆ ಆಗುತ್ತಿದ್ದ ತೊಂದರೆ ತಪ್ಪಿಸಲು ತಾಲೂಕು ಕಚೇರಿಯ ಹಿಂಭಾಗದಲ್ಲಿ ₹1.5 ರಿಂದ ₹2 ಕೋಟಿ ವೆಚ್ಚದಲ್ಲಿ ನೂತನ ಸಬ್-ರಿಜಿಸ್ಟ್ರಾರ್ ಕಚೇರಿ ನಿರ್ಮಾಣ ಮಾಡಲಾಗುವುದು.
  • ​ಸಂತೆ ಮಾರ್ಕೆಟ್: ಸಿದ್ದೇಶ್ವರ ಶಾಲೆಯ ಪಕ್ಕದ ಜಾಗದಲ್ಲಿ ₹3 ಕೋಟಿ ವೆಚ್ಚದಲ್ಲಿ ನೂತನ ಸಂತೆ ಮಾರ್ಕೆಟ್ ನಿರ್ಮಿಸಲಾಗುವುದು.
  • ​ಮಾದರಿ ಬಸ್ ನಿಲ್ದಾಣ: ಹಳೆಯ ಬಸ್ ನಿಲ್ದಾಣದ ನವೀಕರಣಕ್ಕೆ ₹2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
  • ​ರಸ್ತೆ ಮತ್ತು ರೈಲ್ವೆ ಸಂಪರ್ಕ: ರೈಲ್ವೆ ನಿಲ್ದಾಣದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಡಬಲ್ ರೋಡ್ ಮಾಡಿ, ವಿದ್ಯುತ್ ದೀಪ ಅಳವಡಿಸಲಾಗುವುದು. ಮಾರ್ಕೆಟ್ ರಸ್ತೆಯ ವಿವಾದ ಕೋರ್ಟ್‌ನಲ್ಲಿದ್ದು, ಡಿಸಿ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

​news_1790611467_7_230.webp

ಆಶ್ರಯ ನಿವೇಶನ ಮತ್ತು ಯುಜಿಡಿ ಕಾಮಗಾರಿ

​ಜಿಲ್ಲೆಗೆ 50,000 ಹಾಗೂ ಸಾಗರ ತಾಲೂಕಿಗೆ 7,000 ಆಶ್ರಯ ಸೈಟುಗಳನ್ನು ನೀಡುವ ಗುರಿ ಇದೆ. ಇದಕ್ಕಾಗಿ ಈಗಾಗಲೇ 24 ಎಕರೆ ಜಾಗ ಗುರುತಿಸಿ ಪ್ಲಾನ್ ಮಾಡಲಾಗಿದ್ದು, ಮತ್ತೊಂದು 25 ಎಕರೆ ಜಾಗವನ್ನು ಸೇರಿಸಿ ಸುಮಾರು 4,000 ಬಡ ಅರ್ಜಿದಾರರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.

​ಹಿಂದೆ ಶರಾವತಿ ನೀರು ತರಲು ನಾನು ₹70 ಕೋಟಿ ತಂದಾಗ ಟೀಕೆ ಮಾಡಿದ್ದರು; ನಂತರ ಕಾಗೋಡು ತಿಮ್ಮಪ್ಪನವರು ₹30 ಕೋಟಿ ತಂದು ಯೋಜನೆ ಪೂರ್ಣಗೊಳಿಸಿದರು. ಅದೇ ರೀತಿ ಯುಜಿಡಿಗೆ ನಾನು ಈ ಹಿಂದೆ ₹70 ಕೋಟಿ ನೀಡಿದ್ದೆ, ನಂತರ 10 ವರ್ಷ ಯಾರೂ ಕೆಲಸ ಮುಂದುವರಿಸಿರಲಿಲ್ಲ. ಈಗ ಮತ್ತೆ ನಾನು ₹35 ಕೋಟಿ ಅನುದಾನ ತಂದು ಅಪೂರ್ಣ ಯುಜಿಡಿ ಕಾಮಗಾರಿಗೆ ಮರುಚಾಲನೆ ನೀಡಿದ್ದೇನೆ ಎಂದರು.

news_1790611464_0_212.webp

​ಜೋಗ ಜಲಪಾತದ ಸರ್ವತೋಮುಖ ಅಭಿವೃದ್ಧಿ

​ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಸಹಕಾರದೊಂದಿಗೆ ಜೋಗದಲ್ಲಿ 24 ಗಂಟೆಯೂ ನಿರಂತರ ನೀರು ಹರಿಯುವ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ಜೋಗ ಪ್ರಾಧಿಕಾರದ ಮೂಲಕ ಒಟ್ಟು ₹180 ಕೋಟಿ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ₹90 ಕೋಟಿ ವೆಚ್ಚದ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಉಳಿದ ₹90 ಕೋಟಿ ಬಿಡುಗಡೆಯಾಗಲಿದೆ. ಜೋಗದಲ್ಲಿ ಏಕಕಾಲದಲ್ಲಿ 4,000 ಜನರು ವೀಕ್ಷಿಸಲು ವ್ಯವಸ್ಥೆ, ಪ್ರತ್ಯೇಕ ಪಾರ್ಕಿಂಗ್, 3-ಸ್ಟಾರ್ ಹೋಟೆಲ್ ಹಾಗೂ ರೋಪ್‌ವೇ ನಿರ್ಮಾಣಕ್ಕೆ ₹200 ಕೋಟಿವರೆಗಿನ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದರು.

​ಮನೆ ಬಾಗಿಲಿಗೆ ಶಾಸಕರು – 31 ವಾರ್ಡ್‌ಗಳ ಭೇಟಿ

​ನಗರದ 31 ವಾರ್ಡ್‌ಗಳಿಗೂ ಶೀಘ್ರದಲ್ಲೇ ಬೆಳಗ್ಗೆ 7 ಗಂಟೆಗೆ ಸ್ವತಃ ಭೇಟಿ ನೀಡಿ, ದಿನಕ್ಕೆ ಎರಡು ವಾರ್ಡ್‌ಗಳಂತೆ ಜನರ ಸಮಸ್ಯೆಗಳನ್ನು ಆಲಿಸಲಿದ್ದೇನೆ. ಸಾರ್ವಜನಿಕರು ರಸ್ತೆ, ಚರಂಡಿ ಸಮಸ್ಯೆಗಳ ಬಗ್ಗೆ ನೇರವಾಗಿ ತಿಳಿಸಿದರೆ ತಕ್ಷಣ ಪರಿಹಾರ ಒದಗಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪ್ರತಿಯೊಬ್ಬ ಬಡ ಕುಟುಂಬಕ್ಕೂ ತಲುಪಬೇಕು, ಜನ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂಬುದೇ ನಮ್ಮ ಸರ್ಕಾರದ ಆಶಯ ಎಂದು ಶಾಸಕರು ನುಡಿದರು.

news_1790611581_0_845.webp

ಈ ವೇಳೆ ವೇದಿಕೆಯಲ್ಲಿ ಸಾಗರ ನಗರ ಪ್ರಾಧಿಕಾರದ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಬಾಬು, ಆಶ್ರಯ ಸಮಿತಿ ಸದಸ್ಯ ಮಕ್ಬುಲ್ ಸಾಬ್, ಕೆಡಿಪಿ ಸದಸ್ಯೆ ಪ್ರಭಾವತಿ ಚಂದ್ರಕಾಂತ್, ಸಂಜೀವಿನಿ ಒಕ್ಕೂಟದ ಶ್ಯಾಮಲಾ ದೇವರಾಜ್, ಮಾಜಿ ನಗರಸಭಾ ಸದಸ್ಯೆ ಮಧುಮಾಲತಿ, ಮಾಜಿ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಗಣಪತಿ ಬ್ಯಾಂಕ್ ಅಧ್ಯಕ್ಷೆ ಸರಸ್ವತಿ ನಾಗರಾಜ್, ಅನೀಶ್, ಆನಂದ್, ದಿನೇಶ್, ಅಶೋಕ್, ಅವನೀಶ್, ಪೌರಾಯುಕ್ತ ಹೆಚ್.ಕೆ.ನಾಗಪ್ಪ ಮತ್ತಿತರ ಗಣ್ಯರು, ಪಕ್ಷದ ಮುಖಂಡರು, ಫಲಾನುಭವಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಲಿಸುತ್ತಿದ್ದ ಬಸ್‌ನಲ್ಲೇ ಗ್ಯಾಂಗ್‌ರೇಪ್; ನಿರ್ಭಯಾ ಪ್ರಕರಣ ಉಲ್ಲೇಖಿಸಿ ಸುಪ್ರೀಂಕೋರ್ಟ್‌ನಿಂದ ಸ್ವಯಂಪ್ರೇರಿತ ವಿಚಾರಣೆಸಚಿನ್‌ರ 100 ಶತಕಗಳ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೆಷ್ಟು ಶತಕ ಬೇಕು? ಲೆಕ್ಕಾಚಾರ ಹೀಗಿದೆಚಿಕನ್, ಮಟನ್‌ಗಿಂತಲೂ ಹೆಚ್ಚು ಪ್ರೋಟೀನ್.. ಕಸರತ್ತು ಮಾಡುವವರು ಈ ಆಹಾರಗಳನ್ನು ತಪ್ಪದೇ ಸೇವಿಸಿ!Chanakya Neeti : ಶತ್ರುವನ್ನು ಎದುರಿಸಬೇಕಾದರೆ ಆವೇಶವಲ್ಲ..ಈ 7 ತಂತ್ರಗಳನ್ನು ತಿಳಿದುಕೊಳ್ಳಿ!ಪ್ರೇಮಾನಂದ ಮಹಾರಾಜ್ ಶಿಷ್ಯನ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಖಾಸಗಿ ಅಂಗಕ್ಕೆ ಗಾಯ, ರಕ್ತದ ಕಲೆಗಳಿದ್ದ ಗ್ರೈಂಡರ್ ಪತ್ತೆ!ಸಾಗರವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿಪಡಿಸುವುದೇ ನನ್ನ ಸಂಕಲ್ಪ: ಶಾಸಕ ಬೇಳೂರು ಗೋಪಾಲಕೃಷ್ಣರೈಲ್ವೆ ಪ್ರಯಾಣಿಕರ ಗಮನಕ್ಕೆ: ಮೆಮು ರೈಲುಗಳ ಸಂಚಾರ ರದ್ದುಮೇಕೆದಾಟು ಯೋಜನೆಗೆ ತ್ವರಿತ ಅನುಮೋದನೆ ನೀಡಲು ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಗೆ ಸಿಎಂ ಡಿ.ಕೆ. ಶಿವಕುಮಾರ್ ಮನವಿಬ್ಯಾಂಕ್ ಖಾತೆದಾರರು ಮೃತಪಟ್ಟರೆ ಹಣ ಯಾರಿಗೆ ಸಿಗುತ್ತೆ? RBI ನಿಯಮ ತಿಳಿಯಿರಿಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್.. ಟ್ಯಾಕ್ಸ್ ಆಡಿಟ್, ITR ಸಲ್ಲಿಕೆ ಗಡುವು ವಿಸ್ತರಣೆ; ಹೊಸ ದಿನಾಂಕಗಳಿವು