ಉದಯಪುರದ ವಿಶ್ವಪ್ರಸಿದ್ಧ ಒಬೆರಾಯ್ ಉದೈವಿಲಾಸ್ ಐಷಾರಾಮಿ ಹೋಟೆಲ್‌ನಲ್ಲಿ 10 ದಿನಗಳ ಕಾಲ ತಂಗಿದ್ದ ದೆಹಲಿಯ ಕುಟುಂಬವೊಂದು ಬೃಹತ್ ಮೊತ್ತದ ಬಿಲ್ ಪಾವತಿಸದೆ ಜಾರಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ದಂಪತಿ ಹಾಗೂ ಇಬ್ಬರು ಮಕ್ಕಳಿದ್ದ ಈ ಕುಟುಂಬ ಆಗಸ್ಟ್ 14 ರಿಂದ 23 ರವರೆಗೆ ಹೋಟೆಲ್‌ನಲ್ಲಿದ್ದು, ಒಟ್ಟು 5.74 ಲಕ್ಷ ರೂಪಾಯಿ ಬಿಲ್ ಪಾವತಿಸದೇ ಹೊರಟುಹೋಗಿದೆ.
ಹೋಟೆಲ್ ಆಡಳಿತ ಮಂಡಳಿಯ ಪ್ರಕಾರ, ಟ್ರಾವೆಲ್ ಏಜೆನ್ಸಿ ಮೂಲಕ ಈ ಕೊಠಡಿಯನ್ನು ಕಾಯ್ದಿರಿಸಲಾಗಿತ್ತು. ಆದರೆ, ಆಗಸ್ಟ್ 24 ರಂದು ಚೆಕ್-ಔಟ್ ಮಾಡುವಾಗ ಅನುರಾಗ್ ಯಾದವ್ ಎಂಬ ವ್ಯಕ್ತಿ ಬಿಲ್ ಅನ್ನು ಟ್ರಾವೆಲ್ ಏಜೆನ್ಸಿಯವರೇ ಪಾವತಿಸುತ್ತಾರೆ ಎಂದು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಸಬೂಬನ್ನು ಒಪ್ಪದ ಹೋಟೆಲ್ ಸಿಬ್ಬಂದಿ ನೀಡಿದ ದೂರಿನನ್ವಯ ಅಂಬಾಮತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಉದಯಪುರದ ಪಿಚೋಲಾ ಸರೋವರದ ದಂಡೆಯಲ್ಲಿರುವ ಈ ಒಬೆರಾಯ್ ಉದೈವಿಲಾಸ್ ಹೋಟೆಲ್ ಅತ್ಯಂತ ಐಷಾರಾಮಿ ಸೌಲಭ್ಯಗಳಿಗೆ ಹೆಸರಾಗಿದೆ. ‘ಯೇ ಜವಾನಿ ಹೈ ದಿವಾನಿ’ ಸಿನಿಮಾದ ಚಿತ್ರೀಕರಣವೂ ಇಲ್ಲೇ ನಡೆದಿತ್ತು. ಇಲ್ಲಿನ ಸಾಮಾನ್ಯ ಕೊಠಡಿಯೊಂದರ ಒಂದು ದಿನದ ಬಾಡಿಗೆ ಸುಮಾರು 46,500 ರೂಪಾಯಿಯಿಂದ ಆರಂಭವಾಗಿ 67,000 ರೂಪಾಯಿವರೆಗೂ ಇರುತ್ತದೆ.