ಭಾರತದಲ್ಲಿ ಡೆಂಗ್ಯೂ ತಡೆಗಟ್ಟುವಲ್ಲಿ ಮಹತ್ವದ ಹೆಜ್ಜೆಯಾಗಿ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ದೇಶದ ಮೊದಲ ಡೆಂಗ್ಯೂ ಲಸಿಕೆಯಾದ ಟಕೇಡಾ ಬಯೋಫಾರ್ಮಾಸ್ಯೂಟಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ QDENGA ಲಸಿಕೆಗೆ ಮಾರುಕಟ್ಟೆ ಅನುಮೋದನೆ ನೀಡಿದೆ. ಈ ಲಸಿಕೆಯನ್ನು 4 ರಿಂದ 60 ವರ್ಷದೊಳಗಿನ ವ್ಯಕ್ತಿಗಳಲ್ಲಿ ಡೆಂಗ್ಯೂ ತಡೆಗಟ್ಟಲು ಬಳಸಲು ಅನುಮತಿ ನೀಡಲಾಗಿದೆ.
ಪೂರ್ವ ಡೆಂಗ್ಯೂ ಸೋಂಕು ಪರೀಕ್ಷೆ ಅಗತ್ಯವಿಲ್ಲ
QDENGA ಲಸಿಕೆಯ ವಿಶೇಷತೆ ಎಂದರೆ, ಈ ಹಿಂದೆ ಡೆಂಗ್ಯೂ ಸೋಂಕು ತಗುಲಿದೆಯೇ ಎಂಬುದನ್ನು ಪರೀಕ್ಷಿಸುವ ಅಗತ್ಯವಿಲ್ಲ. ಸೋಂಕಿನ ಇತಿಹಾಸವಿದ್ದರೂ ಇಲ್ಲದಿದ್ದರೂ ಈ ಲಸಿಕೆಯನ್ನು ಪಡೆಯಬಹುದು. ಇದರಿಂದ ಡೆಂಗ್ಯೂ ಹೆಚ್ಚಾಗಿ ಹರಡುವ ಪ್ರದೇಶಗಳಲ್ಲಿ ಲಸಿಕೆ ವಿತರಣೆಯನ್ನು ಸುಲಭಗೊಳಿಸಲಾಗುತ್ತದೆ. ಟಕೇಡಾ ಸಂಸ್ಥೆಯ ಇಂಟರ್‌ಕಾಂಟಿನೆಂಟಲ್ ಮಾರ್ಕೆಟ್ಸ್ ವಿಭಾಗದ ಮುಖ್ಯಸ್ಥ ಮಹೇಂದ್ರ ನಾಯಕ್ ಮಾತನಾಡಿ, 2022ರಲ್ಲಿ ಬಿಡುಗಡೆಗೊಂಡ ನಂತರ QDENGA ಲಸಿಕೆಗೆ 43 ದೇಶಗಳಲ್ಲಿ ಅನುಮೋದನೆ ದೊರೆತಿದ್ದು, ವಿಶ್ವದಾದ್ಯಂತ 3.2 ಕೋಟಿಗೂ ಹೆಚ್ಚು ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅವರು, ಏಳು ವರ್ಷಗಳ ಅಧ್ಯಯನದ ಮಾಹಿತಿಯ ಪ್ರಕಾರ QDENGA ನಾಲ್ಕು ವಿಧದ ಡೆಂಗ್ಯೂ ವೈರಸ್‌ಗಳ ವಿರುದ್ಧವೂ ದೀರ್ಘಕಾಲದ ರಕ್ಷಣೆ ನೀಡುವುದರ ಜೊತೆಗೆ ಡೆಂಗ್ಯೂ ಕಾರಣದಿಂದ ಆಸ್ಪತ್ರೆಗೆ ದಾಖಲಾಗುವ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.
ಜಾಗತಿಕ ಹಾಗೂ ಭಾರತೀಯ ಕ್ಲಿನಿಕಲ್ ಪರೀಕ್ಷೆಗಳ ಆಧಾರ
QDENGAಗೆ ಭಾರತದಲ್ಲಿ ದೊರೆತ ಅನುಮೋದನೆ, ಟಕೇಡಾ ನಡೆಸಿದ 19 ಹಂತ-I, II ಹಾಗೂ III ಕ್ಲಿನಿಕಲ್ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ ನೀಡಲಾಗಿದೆ. ಈ ಅಧ್ಯಯನಗಳಲ್ಲಿ 28,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.ಇದರ ಜೊತೆಗೆ, ಭಾರತದಲ್ಲಿ ನಡೆಸಿದ Phase III DEN-302 ಕ್ಲಿನಿಕಲ್ ಟ್ರಯಲ್ ಫಲಿತಾಂಶಗಳು ಕೂಡ ಈ ಅನುಮೋದನೆಗೆ ಆಧಾರವಾಗಿವೆ. ಈ ಅಧ್ಯಯನದಲ್ಲಿ 4 ರಿಂದ 60 ವರ್ಷದೊಳಗಿನವರಲ್ಲಿ ಲಸಿಕೆಯ ಸುರಕ್ಷತೆ ಮತ್ತು ರೋಗನಿರೋಧಕ ಶಕ್ತಿ ಪರಿಶೀಲಿಸಲಾಗಿತ್ತು.
WHO ಶಿಫಾರಸು
ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಡೆಂಗ್ಯೂ ಹೆಚ್ಚು ಕಂಡುಬರುವ ಪ್ರದೇಶಗಳಲ್ಲಿ QDENGA ಬಳಕೆಯನ್ನು ಶಿಫಾರಸು ಮಾಡಿದೆ. ಲಸಿಕೆ ನೀಡುವ ಮೊದಲು ಸೋಂಕಿನ ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು WHO ತಿಳಿಸಿದೆ.ಇದಲ್ಲದೆ, QDENGAಗೆ WHO Prequalification ಕೂಡ ಲಭಿಸಿದ್ದು, ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸಿದೆ. ಇದರಿಂದ UNICEF ಹಾಗೂ PAHO ಮುಂತಾದ ಜಾಗತಿಕ ಸಂಸ್ಥೆಗಳು ಈ ಲಸಿಕೆಯನ್ನು ಖರೀದಿಸಿ ಬಳಸಲು ಅವಕಾಶ ಸಿಗಲಿದೆ.
ನಾಲ್ಕೂ ಡೆಂಗ್ಯೂ ವೈರಸ್ ಪ್ರಭೇದಗಳ ವಿರುದ್ಧ ರಕ್ಷಣೆ
ಟಕೇಡಾದ ಆಗ್ನೇಯ ಏಷ್ಯಾ ಮತ್ತು ಭಾರತ ಕ್ಲಸ್ಟರ್‌ನ ವೈದ್ಯಕೀಯ ವ್ಯವಹಾರಗಳ ಮುಖ್ಯಸ್ಥ ಗೋ ಚೂ ಬೆಂಗ್ ಅವರು, ಭಾರತದಲ್ಲಿ ಡೆಂಗ್ಯೂ ವೈರಸ್‌ನ ನಾಲ್ಕೂ ಪ್ರಮುಖ ಸೆರೋಟೈಪ್‌ಗಳು ಒಂದೇ ಸಮಯದಲ್ಲಿ ಹರಡುತ್ತಿರುವುದು ದಾಖಲಾಗಿದೆ ಎಂದು ತಿಳಿಸಿದ್ದಾರೆ.
QDENGA ಈ ನಾಲ್ಕೂ ಸೆರೋಟೈಪ್‌ಗಳ ವಿರುದ್ಧ ರಕ್ಷಣೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಡೆಂಗ್ಯೂ ನಿಯಂತ್ರಣದಲ್ಲಿ ಸೊಳ್ಳೆ ನಿಯಂತ್ರಣ, ನಿಗಾ ವ್ಯವಸ್ಥೆ, ಸಾರ್ವಜನಿಕ ಜಾಗೃತಿ ಮತ್ತು ಲಸಿಕಾಕರಣ ಸಮಗ್ರವಾಗಿ ನಡೆಯಲು ಇದು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲೇ ಉತ್ಪಾದನೆಗೆ ಸಿದ್ಧತೆ
ಟಕೇಡಾ ಸಂಸ್ಥೆ ಈಗಾಗಲೇ ಭಾರತದ ಬಯಾಲಾಜಿಕಲ್ ಇ (Biological E) ಸಂಸ್ಥೆಯೊಂದಿಗೆ ಕೈಜೋಡಿಸಿ QDENGA ಉತ್ಪಾದನೆಯನ್ನು ವಿಸ್ತರಿಸುವ ಯೋಜನೆ ರೂಪಿಸಿದೆ.2024ರಲ್ಲಿ ಘೋಷಿಸಲಾದ ಈ ಸಹಭಾಗಿತ್ವದಡಿ, ಪ್ರತಿ ವರ್ಷ 5 ಕೋಟಿ (50 ಮಿಲಿಯನ್) ಡೋಸ್‌ಗಳ ಉತ್ಪಾದನಾ ಸಾಮರ್ಥ್ಯ ಭಾರತದಲ್ಲಿ ನಿರ್ಮಿಸಲಾಗುತ್ತದೆ. ದಶಕದ ಅಂತ್ಯದೊಳಗೆ ವಿಶ್ವದಾದ್ಯಂತ 10 ಕೋಟಿ (100 ಮಿಲಿಯನ್) ಡೋಸ್‌ಗಳ ಉತ್ಪಾದನೆ ಗುರಿಯಾಗಿರುವುದಾಗಿ ಕಂಪನಿ ತಿಳಿಸಿದೆ.
ಡೆಂಗ್ಯೂ ಪ್ರಕರಣಗಳಲ್ಲಿ ಭಾರೀ ಏರಿಕೆ
ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ ವರದಿಯಾಗಿರುವ ಡೆಂಗ್ಯೂ ಪ್ರಕರಣಗಳ ಸಂಖ್ಯೆ 11 ಪಟ್ಟು ಹೆಚ್ಚಾಗಿದೆ ಎಂದು ಟಕೇಡಾ ತಿಳಿಸಿದ್ದು, ಡೆಂಗ್ಯೂ ತಡೆಗಟ್ಟುವ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಒತ್ತಿಹೇಳಿದೆ.