ಹೊಸದೆಹಲಿ: ಬಾಲಿವುಡ್ ನಟಿ ಮತ್ತು ರಾಜಕಾರಣಿ ಕಂಗನಾ ರಣಾವತ್ ತಮ್ಮ ಮುಂಬರುವ ಬಹುನಿರೀಕ್ಷಿತ ಸಿನಿಮಾವಾದ ಭಾರತ್ ಭಾಗ್ಯ ವಿಧಾತಾ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಮಹಾರಾಷ್ಟ್ರದ ಸಾಂಪ್ರದಾಯಿಕ ಶೈಲಿಯಲ್ಲಿ ಕಂಗೊಳಿಸಿದ್ದಾರೆ. ದೆಹಲಿಯಲ್ಲಿ ಆಯೋಜಿಸಲಾಗಿದ್ದ ಈ ಪ್ರೀಮಿಯರ್ ಶೋಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಚಿತ್ರದಲ್ಲಿ ತಾವು ನಿರ್ವಹಿಸಿರುವ ಪಾತ್ರಕ್ಕೆ ಗೌರವ ಸಲ್ಲಿಸುವ ಸಲುವಾಗಿ ಕಂಗನಾ ಅವರು ಕರಕುಶಲತೆಗೆ ಹೆಸರಾದ ಆಕರ್ಷಕ ಪೈಠಣಿ ಸೀರೆಯನ್ನು ಉಟ್ಟು ಎಲ್ಲರ ಗಮನ ಸೆಳೆದಿದ್ದಾರೆ.
ಭಾರತ್ ಭಾಗ್ಯ ವಿಧಾತಾ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ನಟಿ ಕಂಗನಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಭಾರತದ ಕೈಮಗ್ಗದ ಸೀರೆಗಳನ್ನು ಧರಿಸಿ ದೇಶೀಯ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಚಿತ್ರತಂಡ, ನಿರ್ಮಾಪಕರು ಮತ್ತು ಕಥೆಗೆ ಸ್ಫೂರ್ತಿಯಾದ ನೈಜ ವ್ಯಕ್ತಿಗಳಿಗಾಗಿ ವಿಶೇಷ ಶೋ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ದೆಹಲಿ ಸಿಎಂ ರೇಖಾ ಗುಪ್ತಾ ಅವರಿಗೆ ಕಂಗನಾ ಆತ್ಮೀಯ ಸ್ವಾಗತ ಕೋರಿದರು.
ತಮ್ಮನ್ನು ಹೆಮ್ಮೆಯಿಂದ ಮರಾಠಿ ಮುಲ್ಗಿ ಎಂದು ಕರೆದುಕೊಂಡ ಕಂಗನಾ ರಣಾವತ್, ತಿಳಿ ಹಳದಿ ಮತ್ತು ಚಿನ್ನದ ಬಣ್ಣದ ರೇಷ್ಮೆ ಪೈಠಣಿ ಸೀರೆಯಲ್ಲಿ ಮಿಂಚಿದ್ದಾರೆ. ಈ ಸೀರೆಯು ಮಯೂರ ಮತ್ತು ಸಾಂಪ್ರದಾಯಿಕ ಹೂವಿನ ವಿನ್ಯಾಸದ ಬಾರ್ಡರ್ ನಿಂದ ಕಂಗೊಳಿಸುತ್ತಿತ್ತು. ಇದಕ್ಕೆ ಮ್ಯಾಚಿಂಗ್ ಆಗುವಂತೆ ರೇಷ್ಮೆಯ ಬ್ಲೌಸ್ ಧರಿಸಿದ್ದು, ಹಳೆಯ ಕಾಲದ ವೈಭವವನ್ನು ಮರುಸೃಷ್ಟಿಸುವಂತೆ ಸಾಂಪ್ರದಾಯಿಕ ಕುಂದನ್ ಹಾರ ಮತ್ತು ಮುತ್ತಿನ ಕಿವಿಯೋಲೆಯನ್ನು ಧರಿಸಿದ್ದರು.
ಕಂಗನಾ ಅವರ ಮುಖದ ಮೇಲಿನ ಸಣ್ಣ ಕೆಂಪು ಬಿಂದಿ, ಆಕರ್ಷಕ ಕಣ್ಣುಗಳು ಮತ್ತು ವಿಭಿನ್ನವಾದ ಹೇರ್ ಸ್ಟೈಲ್ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಂಗನಾ ರಣಾವತ್ ಅವರ ಈ ಮಹಾರಾಷ್ಟ್ರದ ಸಾಂಪ್ರದಾಯಿಕ ಉಡುಗೆಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನಟಿಯ ಲುಕ್ ಗೆ ಫಿದಾ ಆಗಿದ್ದಾರೆ. ರಾಜಕೀಯ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವ ಕಂಗನಾ ಅವರ ಭಾರತ್ ಭಾಗ್ಯ ವಿಧಾತಾ ಚಿತ್ರದ ಮೇಲೆ ಭಾರಿ ನಿರೀಕ್ಷೆ ವ್ಯಕ್ತವಾಗಿದೆ.