ಸಿಯಾಟಲ್- ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಅಧಿಕಾರಿಗಳು ವಲಸೆ ಕಾನೂನು ಉಲ್ಲಂಘನೆಯ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಬಂಧಿಸಲು ಮುಂದಾದಾಗ, ಅವರ ಪುತ್ರಿ ಅಧಿಕಾರಿಯ ಕಾಲಿಗೆ ಅಂಟಿಕೊಂಡು ಕಣ್ಣೀರಿಡುತ್ತಾ ಬೇಡಿಕೊಂಡಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಿಯಾಟಲ್-ಟಕೋಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶನಿವಾರ ಬೆಳಗ್ಗೆ ಅಲಾಸ್ಕಾ ಏರ್‌ಲೈನ್ಸ್‌ನ ಫ್ಲೈಟ್ 1306 ವಿಮಾನ ಹತ್ತಲು ಪ್ರಯಾಣಿಕರು ಸಿದ್ಧರಾಗಿದ್ದ ವೇಳೆ ಈ ಘಟನೆ ನಡೆದಿದೆ. ಮೆಕ್ಸಿಕೋ ಮೂಲದ ರಿಕಾರ್ಡೊ ಲಾರೊಂಡೊ ಮೆಂಡೋಜಾ ಅವರನ್ನು ಬಂಧಿಸಲು ICE ಅಧಿಕಾರಿಗಳು ವಿಮಾನದ ಜೆಟ್ ಸೇತುವೆಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಅವರ ಪುತ್ರಿ ಎಂದು ಹೇಳಲಾದ ಸೋಫಿಯಾ ಲಾರೊಂಡೋ ಅಧಿಕಾರಿಗಳ ಕ್ರಮವನ್ನು ತಡೆಯಲು ಪ್ರಯತ್ನಿಸಿದ್ದಾರೆ.
“ಬೇಡ, ಬೇಡ, ಬೇಡ… ಅವರು ನನ್ನ ತಂದೆಯನ್ನು ಕರೆದುಕೊಂಡು ಹೋಗುತ್ತಿದ್ದಾರೆ. ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ, ಆದರೆ ನಮ್ಮ ಬಳಿ ಕೆಲಸದ ಪರವಾನಗಿ ಇದೆ” ಎಂದು ಸೋಫಿಯಾ ಕಿರುಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ತಂದೆಯನ್ನು ಬಂಧಿಸದಂತೆ ಮನವಿ ಮಾಡುತ್ತಾ ಅವರು ICE ಅಧಿಕಾರಿಯ ಕಾಲಿಗೆ ಅಂಟಿಕೊಂಡು ಕಣ್ಣೀರಿಟ್ಟಿದ್ದಾರೆ.
ICE ಅಧಿಕಾರಿಗಳ ಹೇಳಿಕೆ ಏನು?
ರಿಕಾರ್ಡೊ ಲಾರೊಂಡೊ ಮೆಂಡೋಜಾ ಅವರು ಅಮೆರಿಕದ ವಲಸೆ ಕಾನೂನು ಉಲ್ಲಂಘಿಸಿ, ವೀಸಾ ಅವಧಿ ಮುಗಿದ ನಂತರವೂ ದೇಶದಲ್ಲಿ ಉಳಿದುಕೊಂಡಿದ್ದರು. ಹೀಗಾಗಿ ಅವರನ್ನು ಗುರಿಯಾಗಿಸಿಕೊಂಡು ಬಂಧನ ಕಾರ್ಯಾಚರಣೆ ನಡೆಸಲಾಗಿದೆ ಎಂದು ICE ಸ್ಪಷ್ಟಪಡಿಸಿದೆ.
ಇದೇ ವೇಳೆ ಕಾರ್ಯಾಚರಣೆಯ ಸಂದರ್ಭದಲ್ಲಿ ಮತ್ತೊಬ್ಬ ಪ್ರಯಾಣಿಕರು ಅಧಿಕಾರಿಗಳ ಮೇಲೆ ಬಿಸಿ ಕಾಫಿ ಎಸೆದಿದ್ದಾರೆ ಎಂದು ICE ಆರೋಪಿಸಿದೆ. ಈ ಸಂಬಂಧ ಸೋಫಿಯಾ ಹೆರ್ನಾಂಡೆಜ್ ಮೆಜಿಯಾ ಎಂಬ ಮಹಿಳೆಯನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಫೆಡರಲ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಆದರೆ, ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಹಿಡಿದುಕೊಂಡಿರುವಾಗ, ತಾನು ಕಾಫಿಯನ್ನೂ ಕುಡಿದಿಲ್ಲ ಎಂದು ಹೇಳುತ್ತಿರುವುದು ಕಂಡುಬಂದಿದೆ. ವಿಡಿಯೋದಲ್ಲಿರುವ ಮಹಿಳೆ ಮತ್ತು ICE ಉಲ್ಲೇಖಿಸಿರುವ ಸೋಫಿಯಾ ಹೆರ್ನಾಂಡೆಜ್ ಮೆಜಿಯಾ ಅವರ ಗುರುತು ಒಂದೇ ಎಂಬುದು ಸ್ಪಷ್ಟವಾಗಿಲ್ಲ.
ಅಲಾಸ್ಕಾ ಏರ್‌ಲೈನ್ಸ್ ಅಸಮಾಧಾನ
ಥ್ಯಾಂಕ್ಸ್‌ಗಿವಿಂಗ್ ರಜೆಯ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದ ಸಂದರ್ಭದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಈ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಅಥವಾ ಪೂರ್ವ ಮಾಹಿತಿ ನೀಡಿರಲಿಲ್ಲ ಎಂದು ಅಲಾಸ್ಕಾ ಏರ್‌ಲೈನ್ಸ್ ಅಸಮಾಧಾನ ವ್ಯಕ್ತಪಡಿಸಿದೆ.
“ಇಂದು ಬೆಳಗ್ಗೆ ನಮ್ಮ ಫ್ಲೈಟ್ 1306 ಹತ್ತುವ ಸಂದರ್ಭದಲ್ಲಿ ನಡೆದ ಕಾನೂನು ಜಾರಿ ಸಂಸ್ಥೆಯ ಕಾರ್ಯಾಚರಣೆಯಿಂದ ನಾವು ಕಳವಳಗೊಂಡಿದ್ದೇವೆ. ಈ ಘಟನೆಯಿಂದ ತೊಂದರೆಗೊಳಗಾದ ನಮ್ಮ ಉದ್ಯೋಗಿಗಳು ಮತ್ತು ಪ್ರಯಾಣಿಕರ ಸಂಕಷ್ಟವನ್ನು ನಾವು ಅರ್ಥಮಾಡಿಕೊಂಡಿದ್ದೇವೆ” ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಘಟನೆಯಿಂದ ವಿಮಾನ ಹಾರಾಟವೂ ವಿಳಂಬವಾಗಿದೆ.
ವಾಷಿಂಗ್ಟನ್ ಗವರ್ನರ್ ಕಿಡಿ
ICE ಅಧಿಕಾರಿಗಳ ಕಾರ್ಯಾಚರಣೆಯನ್ನು ವಾಷಿಂಗ್ಟನ್ ರಾಜ್ಯದ ಡೆಮಾಕ್ರಟಿಕ್ ಗವರ್ನರ್ ಬಾಬ್ ಫರ್ಗುಸನ್ ತೀವ್ರವಾಗಿ ಟೀಕಿಸಿದ್ದಾರೆ.
“ICE ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿದೆ. ಇಂದು ನಾವು ಅದಕ್ಕೆ ಮತ್ತಷ್ಟು ಪುರಾವೆಗಳನ್ನು ಎದುರಿಸುತ್ತಿದ್ದೇವೆ” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
, ಅಮೆರಿಕದಲ್ಲಿ ವಲಸೆ ನೀತಿ ಮತ್ತು ICE ಅಧಿಕಾರಿಗಳ ಬಂಧನ ಕಾರ್ಯಾಚರಣೆಗಳ ಕುರಿತು ಮತ್ತೆ ಚರ್ಚೆ ತೀವ್ರಗೊಂಡಿದ್ದು, ಸಿಯಾಟಲ್ ವಿಮಾನ ನಿಲ್ದಾಣದ ಈ ಘಟನೆ ಮಾನವೀಯತೆ, ವಲಸೆ ಕಾನೂನು ಮತ್ತು ಅಧಿಕಾರಿಗಳ ಕಾರ್ಯವೈಖರಿ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.