ವಾಷಿಂಗ್ಟನ್: ಅಮೆರಿಕದ ಸಿಯಾಟಲ್-ಟಕೋಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮಾನವೀಯ ಘಟನೆ ನಡೆದಿದೆ. ಮಹಿಳೆಯೊಬ್ಬರನ್ನು ಬಂಧಿಸಿದ ಅಧಿಕಾರಿಗಳು ದರದರನೆ ಎಳೆದೊಯ್ದಿದ್ದಾರೆ.
ಪ್ರಯಾಣಿಕರು ವಿಮಾನ ಏರಲು ಸಿದ್ಧರಾಗಿದ್ದ ವೇಳೆ, ಮುಖಕ್ಕೆ ಮಾಸ್ಕ್ ಧರಿಸಿದ್ದ ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಅಧಿಕಾರಿಗಳು ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ.
ಶನಿವಾರ ನಡೆದ ಈ ಘಟನೆಯಿಂದ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಪ್ರಯಾಣಿಕರು ಹಾಗೂ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಆತಂಕಕ್ಕೊಳಗಾಗಿದ್ದಾರೆ. ಘಟನೆಯಿಂದ ವಿಮಾನ ಹಾರಾಟವೂ ವಿಳಂಬವಾಗಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದ್ದು, ಅಧಿಕಾರಿಗಳು ಕನಿಷ್ಠ ಒಬ್ಬ ವ್ಯಕ್ತಿಯನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿದೆ. ಈ ವೇಳೆ ಮಹಿಳೆಯೊಬ್ಬರು, ʻನನ್ನ ಮಗಳನ್ನ ಕರೆದುಕೊಂಡು ಹೋಗುತ್ತಿದ್ದಾರೆ, ಆಕೆಯ ಬಳಿ ಮಾನ್ಯವಾದ ಕೆಲಸದ ಪರವಾನಗಿ (ವರ್ಕಿಂಗ್ ಪರ್ಮಿಟ್) ಇದೆʼ ಎಂದು ಚೀರಾಡುತ್ತಿರೋದು ವಿಡಿಯೋದಲ್ಲಿ ಕಂಡುಬಂದಿದೆ.
ಪ್ರಯಾಣಿಕರು ಅಲಾಸ್ಕಾ ಏರ್‌ಲೈನ್ಸ್‌ನ ಫ್ಲೈಟ್ 1,306 ವಿಮಾನ ಏರಲು ಬೋರ್ಡಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ವಿಮಾನ ಬೆಳಗ್ಗೆ 8:10ಕ್ಕೆ ಲಾಸ್ ಏಂಜಲೀಸ್‌ಗೆ ಹೊರಡಬೇಕಿತ್ತು. ಆದರೆ, ಘಟನೆಯಿಂದಾಗಿ ವಿಮಾನ ಹಾರಾಟ ವಿಳಂಬವಾಗಿರುವುದಾಗಿ ಆನ್‌ಲೈನ್ ಫ್ಲೈಟ್ ಟ್ರ್ಯಾಕಿಂಗ್ ಮಾಹಿತಿ ತಿಳಿಸಿದೆ.
ಬಂಧನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ICE ಅಧಿಕಾರಿಗಳು ಗುರುತಿನ ಚಿಹ್ನೆಗಳಿಲ್ಲದ ಜಾಕೆಟ್‌ಗಳು ಹಾಗೂ ಖಾಕಿ ಬಣ್ಣದ ಪ್ಯಾಂಟ್‌ಗಳನ್ನು ಧರಿಸಿದ್ದರು. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ನೆಲದ ಮೇಲೆ ಬಿದ್ದಿರುವಾಗ ಅಧಿಕಾರಿಗಳು ಅವರನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಸುತ್ತಮುತ್ತ ಸೂಟ್‌ಕೇಸ್‌ಗಳೊಂದಿಗೆ ನಿಂತಿದ್ದ ಪ್ರಯಾಣಿಕರು ಈ ದೃಶ್ಯವನ್ನು ಆತಂಕದಿಂದ ವೀಕ್ಷಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ICE, ಅಮೆರಿಕದ ವಲಸೆ ಕಾನೂನುಗಳನ್ನ ಉಲ್ಲಂಘಿಸಿ ವೀಸಾ ಅವಧಿ ಮುಗಿದ ಬಳಿಕವೂ ದೇಶದಲ್ಲಿ ಉಳಿದುಕೊಂಡಿದ್ದ ಆರೋಪದ ಮೇಲೆ ಮೆಕ್ಸಿಕೊ ಮೂಲದ ರಿಕಾರ್ಡೊ ಲಾರೊಂಡೊ ಮೆಂಡೋಜಾ ಎಂಬಾತನನ್ನ ಬಂಧಿಸಲು ಉದ್ದೇಶಿತ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಮತ್ತೊಬ್ಬ ಪ್ರಯಾಣಿಕರು ಅಧಿಕಾರಿಗಳ ಮೇಲೆ ಬಿಸಿ ಕಾಫಿ ಎರಚಿದ್ದಾರೆ. ಸೋಫಿಯಾ ಹೆರ್ನಾಂಡೆಜ್ ಮೆಜಿಯಾ ಎಂಬ ಮಹಿಳೆಯನ್ನು ಮೆಕ್ಸಿಕೊ ಮೂಲದವರಾಗಿದ್ದು, ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದರು ಹಾಗೂ ವೀಸಾ ಅವಧಿ ಮುಗಿದ ಬಳಿಕವೂ ದೇಶದಲ್ಲೇ ಉಳಿದುಕೊಂಡಿದ್ದರು ಎಂದು ICE ಆರೋಪಿಸಿದೆ.
ಅಲ್ಲದೆ, ಫೆಡರಲ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಆಕೆಯ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆಯೂ ಇದೆ. ಕಳೆದ ಬೇಸಿಗೆಯಿಂದ ICE ವಿಮಾನ ನಿಲ್ದಾಣಗಳಲ್ಲಿ ಬಂಧನ ಕಾರ್ಯಾಚರಣೆಗಳನ್ನ ತೀವ್ರಗೊಳಿಸಿದೆ. ವಿಶೇಷವಾಗಿ ವೀಸಾ ಅವಧಿ ಮುಗಿದಿದ್ದರೂ ಅಮೆರಿಕದಲ್ಲಿ ಉಳಿದುಕೊಂಡಿರುವವರನ್ನ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದೆ.
ಈ ಕಾರ್ಯಾಚರಣೆ ಕುರಿತು ಯಾವುದೇ ಮುನ್ಸೂಚನೆಯನ್ನು ICE ಅಧಿಕಾರಿಗಳು ನೀಡಿರಲಿಲ್ಲ ಎಂದು ಅಲಾಸ್ಕಾ ಏರ್‌ಲೈನ್ಸ್ ತಿಳಿಸಿದೆ. ಥ್ಯಾಂಕ್ಸ್‌ಗಿವಿಂಗ್ ರಜೆಯ ಮುನ್ನ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.