ಕೋಲ್ಕತ್ತಾ: ಚೋರ್ಬಗಾನ್ ದುರ್ಗಾ ಪೂಜಾ ಪೆಂಡಾಲ್ನಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, 19 ಜನರು ಮೃತಪಟ್ಟಿದ್ದಾರೆ., 25 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಉತ್ತರ ಕೋಲ್ಕತ್ತಾದ ಚೋರ್ಬಗಾನ್ ದುರ್ಗಾ ಪೂಜೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಏಕಾಏಕಿ ಮಳೆ ಬಂದ ಕಾರಣ ಪೂಜಾ ಪೆಂಡಾಲ್ನ ಹೊರಗೆ ಕಾಯುತ್ತಿದ್ದ ಜನಸಮೂಹವು ಒಮ್ಮೆಲೇ ಒಳಗೆ ನುಗ್ಗಿದೆ. ಈ ವೇಳೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಕೋಲ್ಕತ್ತಾದ ಚೋರ್ಬಗಾನ್ನಲ್ಲಿ ದುರ್ಗಾ ಪೂಜೆ ನಡೆಯುತ್ತಿದ್ದಾಗ ಆಯೋಜಕರು ಮಾಡಿದ ಘೋಷಣೆಯೊಂದರಿಂದಾಗಿ ನೂಕು ನುಗ್ಗಲು ಉಂಟಾಗಿ, ಈ ದುರಂತ ಸಂಭವಿಸಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ತಿಳಿಸಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ, 19 ಮಂದಿ ಮೃತಪಟ್ಟಿದ್ದಾರೆ ಮತ್ತು 25 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ. ಸಂತ್ರಸ್ತರನ್ನು ದಾಖಲಿಸಿದ್ದ ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಿಎಂ ಸುವೆಂಧು ಅಧಿಕಾರಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಇದೇ ವೇಳೆ ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರ ಹಾಗೂ ಒಬ್ಬರಿಗೆ ‘ಗ್ರೂಪ್ ಡಿ’ ಶ್ರೇಣಿಯ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಘೋಷಿಸಿದ್ದಾರೆ.
ಚೋರ್ಬಗಾನ್ ದುರ್ಗಾ ಪೂಜಾ ಆಯೋಜಕರು, ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರ ಕುಟುಂಬ ಸದಸ್ಯರ ಪ್ರಕಾರ, ಪೆಂಡಾಲ್ ಪ್ರದೇಶದಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಊದಿದ ಸೀಟಿಯಿಂದಾಗಿ, ಪೆಂಡಾಲ್ಗೆ ಭೇಟಿ ನೀಡಲು ಕಾಯುತ್ತಿದ್ದ ಜನರಲ್ಲಿ ನೂಕುನುಗ್ಗಲು ಉಂಟಾಯಿತು ಎಂದು ಸಿಎಂ ಮಾಅಹಿತಿ ನೀಡಿದ್ದಾರೆ.
ಇದು ಅತ್ಯಂತ ದುಃಖಕರ ಘಟನೆ. ನಾವು ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.