ಬೆಂಗಳೂರು: ನಟ ಧನ್ವೀರ್ ಗೌಡಗೆ ಸಂಬಂಧಿಸಿದ ಬೆದರಿಕೆ ಪ್ರಕ್ರಣದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದ್ದು, ತನಿಖೆ ಮುಂದುವರೆಸಲು ಸೂಚಿಸಿದೆ. ಇದರಿಂದ ಧನ್ವೀರ್ ಗೆ ಸಂಕಷ್ಟ ಎದುರಾಗಿದೆ.
ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಧನ್ವೀರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಧನ್ವೀರ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಪ್ರಕರಣದ ತನಿಖೆಗೆ ವಿಧಿಸಿದ್ದ ತಡೆಯಾಜ್ಞೆಯನ್ನೂ ತೆರವುಗೊಳಿಸಿ, ತನಿಖೆ ಮುಂದುವರಿಸಲು ಅನುಮತಿ ನೀಡಿದೆ.
ಧನ್ವೀರ್ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿದ ಬಳಿಕ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.
ವಿಚಾರಣೆ ವೇಳೆ ಧನ್ವೀರ್‌ಗೌಡ ಪರ ವಕೀಲರು, ”ದೂರುದಾರರು ಧನ್ವೀರ್ ಮನೆಗೆ ಬಂದು ಅವರ ತಂದೆಯನ್ನು ನಿಂದಿಸಿದ್ದಾರೆ. ಆದರೆ, ಧನ್ವೀರ್ ಅವರು ವಿಜಯಲಕ್ಷ್ಮಿ ಅವರನ್ನು ನಿಂದಿಸಿಲ್ಲ. ಆದರೆ ತಪ್ಪಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ರದ್ದುಪಡಿಸಬೇಕು,” ಎಂದು ಕೋರಿದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ಪ್ರಕರಣ ಸಂಬಂಧ ವಾಟ್ಸಾಪ್ ಸಂದೇಶಗಳು ಹಾಗೂ ಮೊಬೈಲ್ ಸಂಭಾಷಣೆಗಳ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅಲ್ಲದೆ, ದೂರುದಾರ ನಾಗರಾಜ್‌ಗೆ ಬೆದರಿಕೆ ಹಾಕಿರುವುದಕ್ಕೆ ಸಂಬಂಧಿಸಿದ ಪುರಾವೆಗಳಿವೆ. ದೂರಿನಲ್ಲಿಮಾಡಿರುವ ಆರೋಪಗಳಿಗೆ ಪೂರಕವಾದ ಸಾಕ್ಷ್ಯಾಧಾರಗಳೂ ಲಭ್ಯ ಇವೆ ಎಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಪ್ರಕರಣದ ತನಿಖೆಗೆ ವಿಧಿಸಿದ್ದ ತಡೆಯನ್ನು ತೆರವುಗೊಳಿಸಿ, ತನಿಖೆ ಮುಂದುವರಿಸಲು ಅನುಮತಿ ನೀಡಿದೆ.