ಮುಂಬೈ: ಸದಾ ಒಂದಲ್ಲ ಒಂದು ವಿವಾದ ಮತ್ತು ಬೋಲ್ಡ್ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ನಟಿ ಪೂನಂ ಪಾಂಡೆ ಇದೀಗ ಜನಪ್ರಿಯ ಹಾಸ್ಯ ಕಾರ್ಯಕ್ರಮ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಸೀಸನ್ 2 ಕುರಿತು ತಮಾಷೆಯಾಗಿ ಕಾಲೆಳೆದಿದ್ದಾರೆ. ಸ್ಟ್ಯಾಂಡ್ ಅಪ್ ಕಾಮಿಡಿಯನ್ ಸಮಯ್ ರೈನಾ ನಡೆಸಿಕೊಡುವ ಈ ಶೋನ ಎರಡನೇ ಸೀಸನ್ ಮುಕ್ತಾಯಗೊಂಡಿದ್ದರೂ, ತಾವು ಭಾಗವಹಿಸಿದ್ದ ಎಪಿಸೋಡ್ ಮಾತ್ರ ಪ್ರಸಾರವಾಗದಿರುವ ಬಗ್ಗೆ ಪೂನಂ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಮಯ ಪೋಸ್ಟ್ ಹಂಚಿಕೊಂಡಿದ್ದಾರೆ.
ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೋನ ಸೆಟ್‌ನಲ್ಲಿ ತೆಗೆದಿರುವ ಕೆಲವು ಫೋಟೋಗಳನ್ನು ಪೂನಂ ಪಾಂಡೆ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅಡಿಬರಹ ನೀಡಿರುವ ಅವರು, ಇಂಡಿಯಾಸ್ ಗಾಟ್ ಲ್ಯಾಟೆಂಟ್ ಸೀಸನ್ ಎರಡರ ನನ್ನ ಎಪಿಸೋಡ್ ಸ್ವಲ್ಪ ಹೆಚ್ಚೇ ವಿವಾದಾತ್ಮಕವಾಗಿತ್ತು ಎನಿಸುತ್ತದೆ, ಅದಕ್ಕಾಗಿಯೇ ಅದನ್ನು ಪೋಸ್ಟ್ ಮಾಡಿಲ್ಲ ಎಂದು ತಮಾಷೆ ಮಾಡಿದ್ದಾರೆ. ಅವರು ಹಂಚಿಕೊಂಡಿರುವ ಚಿತ್ರಗಳಲ್ಲಿ ಸಮಯ್ ರೈನಾ ಅವರೊಂದಿಗೆ ಬಲರಾಜ್ ಘಾಯ್, ಮಹೀಪ್ ಸಿಂಗ್ ಮತ್ತು ಮಧುರ್ ವಿರ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.
ಒಂದು ವೇಳೆ ಈ ಸಂಚಿಕೆ ಬಿಡುಗಡೆಯಾಗಿದ್ದರೆ, ಅದು ಈ ಕಾಮಿಡಿ ಶೋನಲ್ಲಿ ಪೂನಂ ಅವರ ಎರಡನೇ ಅತಿಥಿ ಪಾತ್ರವಾಗುತ್ತಿತ್ತು. ಇದಕ್ಕೂ ಮುನ್ನ 2024ರಲ್ಲಿ ಪ್ರಸಾರವಾಗಿದ್ದ ಮೊದಲ ಸೀಸನ್‌ನ ಎಂಟನೇ ಸಂಚಿಕೆಯಲ್ಲಿ ವಿದಿತ್ ಗುಜರಾತಿ ಮತ್ತು ಸಾಗರ್ ಶಾ ಅವರೊಂದಿಗೆ ಪೂನಂ ತೀರ್ಪುಗಾರರಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಇದೀಗ ಎರಡನೇ ಸೀಸನ್ ಮುಗಿದರೂ ತಮ್ಮ ಸಂಚಿಕೆ ಹೊರಬರದಿರುವುದಕ್ಕೆ ಪೂನಂ ನೀಡಿರುವ ಈ ತಮಾಷೆಯ ಕಾರಣ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.
ಸಿನಿಮಾ ಮತ್ತು ಕಿರುತೆರೆ ವಿಚಾರಕ್ಕೆ ಬರುವುದಾದರೆ, ಪೂನಂ ಪಾಂಡೆ ಕೊನೆಯದಾಗಿ 2022ರಲ್ಲಿ ಕಂಗನಾ ರಣಾವತ್ ನಿರೂಪಣೆಯ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಆ ಸೀಸನ್‌ನಲ್ಲಿ ಮುನಾವರ್ ಫಾರೂಕಿ ವಿಜೇತರಾಗಿದ್ದರೆ, ಪಾಯಲ್ ರೋಹಟಗಿ ರನ್ನರ್ ಅಪ್ ಆಗಿದ್ದರು. ಸದ್ಯ ಪೂನಂ ಪಾಂಡೆ ಮುಂಬೈನ ವಿವಿಧ ಪಾರ್ಟಿಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪದೇ ಪದೇ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ.