ನವದೆಹಲಿ: UPI MDR ಶುಲ್ಕಗಳನ್ನು ಗ್ರಾಹಕರ ಮೇಲೆ ಹೊರಿಸದಂತೆ ವ್ಯಾಪಾರಿಗಳು ಭರಿಸುವುದನ್ನು ಸರ್ಕಾರ ಖಚಿತಪಡಿಸಲಿದೆ.
ಆಯ್ದ UPI ಪಾವತಿಗಳ ಮೇಲೆ ಶೇಕಡ 0.4 ರಷ್ಟು ಮರ್ಚೆಂಟ್ ಡಿಸ್ಕೌಂಟ್ ದರವನ್ನು(MDR) ವಿಧಿಸುವ ನಿರ್ಧಾರವನ್ನು ಹಿಂಪಡೆಯುವಂತೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿರುವ ನಡುವೆಯೇ, ಸರ್ಕಾರಿ ಮೂಲಗಳು ಗುರುವಾರ ಈ ವಿಷಯದ ಬಗ್ಗೆ ಸೂಕ್ತ ಪರಿಶೀಲನೆಯ ನಂತರವೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿವೆ. ಅಲ್ಲದೆ, ವ್ಯಾಪಾರಿಗಳು ಈ ಶುಲ್ಕವನ್ನು ಗ್ರಾಹಕರ ಮೇಲೆ ಹೊರಿಸದಂತೆ ನೋಡಿಕೊಳ್ಳಲು ಸರ್ಕಾರವು ಇದರ ಅನುಷ್ಠಾನವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಿದೆ ಎಂದು ಹೇಳಿವೆ. “ಅನುಷ್ಠಾನದಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು. ಸರ್ಕಾರವು ಪಾವತಿ ಅಗ್ರಿಗೇಟರ್ ಗಳೊಂದಿಗೆ (payment aggregators) ಚರ್ಚೆ ನಡೆಸಿದೆ. ವ್ಯಾಪಾರಿಗಳು ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸದಂತೆ ಖಚಿತಪಡಿಸಿಕೊಳ್ಳಲು ಸರ್ಕಾರವು ಪರಿಣಾಮಕಾರಿ ಅನುಷ್ಠಾನವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ ಎಂದು ಹೇಳಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಶೇಕಡ 0.02 ರಷ್ಟು MDR ಶುಲ್ಕವನ್ನು ವಿಧಿಸುವ ನಿರ್ಧಾರವನ್ನು SEBI, ಷೇರು ವಿನಿಮಯ ಕೇಂದ್ರಗಳು ಮತ್ತು ಸಂಬಂಧಿತ ಪಾಲುದಾರರೊಂದಿಗೆ ಚರ್ಚಿಸಿದ ನಂತರವೇ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
UPI MDR ನಿರ್ಧಾರದಲ್ಲಿ ಅಮೆರಿಕದ ಯಾವುದೇ ಒತ್ತಡವಿಲ್ಲ
ಆಯ್ದ UPI ಪಾವತಿಗಳ ಮೇಲೆ ಶೇಕಡ 0.4 ರಷ್ಟು MDR ವಿಧಿಸಲು ಸರ್ಕಾರದ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಮೂಲಗಳು ಪುನರುಚ್ಚರಿಸಿವೆ. ಅಲ್ಲದೆ, UPI ಮೇಲೆ ಸರಕು ಮತ್ತು ಸೇವಾ ತೆರಿಗೆ (GST) ವಿಧಿಸಲಾಗುತ್ತದೆ ಎಂಬುದು ಸುಳ್ಳು ವದಂತಿ ಎಂದು ಸ್ಪಷ್ಟಪಡಿಸಿವೆ.
ಇದನ್ನು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್(Input Tax Credit) ಮೂಲಕ ಸರಿದೂಗಿಸಲಾಗುತ್ತದೆ. ಏನಾದರೂ ಸಮಸ್ಯೆ ಉಂಟಾದರೆ, GST ಮಂಡಳಿಯು ಅದನ್ನು ಪರಿಶೀಲಿಸುತ್ತದೆ. MDR ಕಾರಣದಿಂದಾಗಿ ನಗದು ವಹಿವಾಟುಗಳಲ್ಲಿ ಹೆಚ್ಚಿನ ಹೆಚ್ಚಳವಾಗುವ ಸಾಧ್ಯತೆಯಿಲ್ಲ. ನಗದು ವಹಿವಾಟು ಹೆಚ್ಚಾಗುವುದಿಲ್ಲ ಎಂಬ ವಿಶ್ವಾಸ ನಮಗಿದೆ. ಅಕ್ಟೋಬರ್ 15 ರಂದು ಇದು ಜಾರಿಗೆ ಬಂದ ನಂತರ UPI ವಹಿವಾಟುಗಳು ಕಡಿಮೆಯಾಗುತ್ತವೆ ಎಂದು ನಿರೀಕ್ಷಿಸಬೇಡಿ ಎಂದು ಮೂಲಗಳು ಹೇಳಿವೆ.
RuPay ಡೆಬಿಟ್ ಕಾರ್ಡ್‌ಗಳನ್ನು ಉತ್ತೇಜಿಸುತ್ತಿರುವ NPCI
UPI ಪ್ಲಾಟ್ ಫಾರ್ಮ್ ಅನ್ನು ನಿರ್ವಹಿಸುವ ‘ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ'(NPCI), ಡಿಜಿಟಲ್ ಪಾವತಿ ವ್ಯವಸ್ಥೆಗೆ ಸುಸ್ಥಿರ ಆದಾಯದ ಚೌಕಟ್ಟನ್ನು ರಚಿಸುವ ಉದ್ದೇಶದಿಂದ, ಸೆಪ್ಟೆಂಬರ್ 15 ರಂದು ನಿರ್ದಿಷ್ಟ UPI ವಹಿವಾಟುಗಳ ಮೇಲೆ MDR ವಿಧಿಸುವ ಕುರಿತು ಸುತ್ತೋಲೆಯನ್ನು ಹೊರಡಿಸಿತ್ತು.
NPCI ನಿರಂತರವಾಗಿ RuPay ಡೆಬಿಟ್ ಕಾರ್ಡ್‌ಗಳನ್ನು ಉತ್ತೇಜಿಸುತ್ತಿದೆ ಮತ್ತು RuPay ಡೆಬಿಟ್ ಕಾರ್ಡ್‌ಗಳ ಬಳಕೆಯನ್ನು MDR ವ್ಯಾಪ್ತಿಯಿಂದ ಹೊರಗಿಡಲಾಗಿದೆ (ಅಂದರೆ ಶುಲ್ಕವಿಲ್ಲ) ಎಂದು ಮೂಲಗಳು ತಿಳಿಸಿವೆ. “ಇತರ ಕಾರ್ಡ್‌ಗಳಿಗೆ ಹೋಲಿಸಿದರೆ RuPay ಕಾರ್ಡ್‌ಗಳು ಹೆಚ್ಚಿನ ಪ್ರಯೋಜನವನ್ನು ಹೊಂದಿರುತ್ತವೆ,” ಎಂದು ಅವು ಹೇಳಿವೆ.
ಶುಲ್ಕಗಳು ಯಾವುವು?
ಅಕ್ಟೋಬರ್ 15 ರಿಂದ, 2,000 ರೂ.ಗಿಂತ ಹೆಚ್ಚಿನ ಮೌಲ್ಯದ ‘ವ್ಯಕ್ತಿಯಿಂದ ವ್ಯಾಪಾರಿಗೆ'(person-to-merchant) ನಡೆಯುವ UPI ಪಾವತಿಗಳಿಗೆ ಶೇಕಡಾ 0.4 ರಷ್ಟು MDR ಅನ್ವಯಿಸುತ್ತದೆ. ಗ್ರಾಹಕರ ಬದಲಿಗೆ ವ್ಯಾಪಾರಿಗಳು ಈ ಶುಲ್ಕವನ್ನು ಪಾವತಿಸಬೇಕಾಗುತ್ತದೆ; 75,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಈ ಶುಲ್ಕವು ಗರಿಷ್ಠ 300 ರೂ.ಗೆ ಸೀಮಿತವಾಗಿರುತ್ತದೆ. ವ್ಯಕ್ತಿಗಳ ನಡುವಿನ ಪಾವತಿಗಳು ಹಾಗೂ ದೈನಂದಿನ ಹೆಚ್ಚಿನ ವ್ಯಾಪಾರಿ ಪಾವತಿಗಳು ಉಚಿತವಾಗಿಯೇ ಮುಂದುವರಿಯಲಿವೆ. ರೈಲ್ವೆ, ದೂರಸಂಪರ್ಕ, ಇಂಧನ ಮತ್ತು ವಿಮೆಯಂತಹ ಅಗತ್ಯ ಸೇವೆಗಳಿಗೆ, 2,000 ರೂ.ಗಿಂತ ಹೆಚ್ಚಿನ ಪ್ರತಿ ವಹಿವಾಟಿನ ಮೇಲೆ 5 ರೂ.ಗಳ ಸ್ಥಿರ ಶುಲ್ಕ ವಿಧಿಸಲಾಗುತ್ತದೆ.
ಬಂಡವಾಳ ಮಾರುಕಟ್ಟೆ ವಹಿವಾಟುಗಳಿಗೆ (ಮ್ಯೂಚುವಲ್ ಫಂಡ್‌ಗಳು, ಷೇರು ದಲ್ಲಾಳಿ ಸೇವೆಗಳು) ಶೇ. 0.02 ರಷ್ಟು ಕಡಿಮೆ ದರ ಅನ್ವಯಿಸುತ್ತದೆ ಮತ್ತು ಇದಕ್ಕೆ ಗರಿಷ್ಠ ಮಿತಿಯನ್ನು 300 ರೂ.ಗೆ ನಿಗದಿಪಡಿಸಲಾಗಿದೆ.
ಯುಪಿಐ(UPI) ಕ್ಯೂಆರ್(QR) ಕೋಡ್‌ಗಳ ಮೂಲಕ ತಿಂಗಳಿಗೆ 1 ಲಕ್ಷ ರೂ.ವರೆಗೆ ಹಣ ಸ್ವೀಕರಿಸುವ ಸಣ್ಣ ವ್ಯಾಪಾರಿಗಳಿಗೆ ಯಾವುದೇ ಹೊಸ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ; ಅಧಿಕಾರಿಗಳ ಪ್ರಕಾರ, ಈ ವಿನಾಯಿತಿಯು ಒಟ್ಟು ವ್ಯಾಪಾರಿ ವಹಿವಾಟುಗಳ ಪೈಕಿ ಸುಮಾರು ಶೇ. 96 ರಷ್ಟನ್ನು ರಕ್ಷಿಸುತ್ತದೆ.