ಟಾಲಿವುಡ್‌ನ ಜನಪ್ರಿಯ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿರುವ ಬಹುನಿರೀಕ್ಷಿತ ‘ರಣಬಲಿ’ ಚಿತ್ರದ ಕುರಿತು ಬಿಗ್ ಅಪ್‌ಡೇಟ್ ಒಂದನ್ನು ಚಿತ್ರತಂಡ ಹಂಚಿಕೊಂಡಿದೆ. ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಈ ಪ್ಯಾನ್ ಇಂಡಿಯಾ ಪೀರಿಯಡ್ ಡ್ರಾಮಾ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಒಟ್ಟು 130 ದಿನಗಳ ಕಾಲ ನಡೆದ ಸತತ ಮತ್ತು ಸುದೀರ್ಘ ಚಿತ್ರೀಕರಣದ ವೇಳಾಪಟ್ಟಿಯನ್ನು ಚಿತ್ರತಂಡ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಚಿತ್ರೀಕರಣ ಯಶಸ್ವಿಯಾಗಿ ಮುಗಿದಿರುವ ಸಂತಸದ ಕ್ಷಣಗಳನ್ನು ಚಿತ್ರತಂಡ ವಿಶೇಷ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ನಿರ್ದೇಶಕ ರಾಹುಲ್ ಸಾಂಕೃತ್ಯಾಯನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಅದ್ದೂರಿ ಚಿತ್ರವು, ಶೂಟಿಂಗ್ ಮುಗಿಯುತ್ತಿದ್ದಂತೆಯೇ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಪ್ರವೇಶಿಸಿದೆ. ಎಡಿಟಿಂಗ್, ಡಬ್ಬಿಂಗ್ ಹಾಗೂ ಗ್ರಾಫಿಕ್ಸ್ ಸೇರಿದಂತೆ ತಾಂತ್ರಿಕ ಕಾರ್ಯಗಳು ಈಗ ಭರದಿಂದ ಸಾಗುತ್ತಿದ್ದು, ಅಂತಿಮ ರೂಪ ನೀಡುವ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ.
ಮೈತ್ರಿ ಮೂವಿ ಮೇಕರ್ಸ್‌ನಂತಹ ಪ್ರಸಿದ್ಧ ನಿರ್ಮಾಣ ಸಂಸ್ಥೆ ಈ ಯೋಜನೆಯನ್ನು ನಿರ್ಮಿಸುತ್ತಿದ್ದು, ಕಥೆ ಹಾಗೂ ಮೇಕಿಂಗ್ ವಿಚಾರದಲ್ಲಿ ಎಲ್ಲೂ ರಾಜಿ ಮಾಡಿಕೊಳ್ಳದೆ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ. ಇನ್ನು ಚಿತ್ರದ ಸಂಗೀತದ ಜವಾಬ್ದಾರಿಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಸಿದ್ಧ ಸಂಗೀತ ಜೋಡಿ ಅಜಯ್ ಮತ್ತು ಅತುಲ್ ವಹಿಸಿಕೊಂಡಿದ್ದಾರೆ. ಈ ಪೈಕಿ ಚಿತ್ರದ ಮೊದಲ ಸಾಂಗ್ ‘ಎಂದಯ್ಯ ಸಾಮಿ’ ಲಿರಿಕಲ್ ವಿಡಿಯೋ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಂಡ ಘೋಷಿಸಿದೆ.
ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಪ್ರಚಾರ ಸಾಮಗ್ರಿಗಳು ಹಾಗೂ ಪೋಸ್ಟರ್‌ಗಳು ಅಭಿಮಾನಿಗಳಲ್ಲಿ ಭಾರೀ ಕೌತುಕವನ್ನು ಉಂಟುಮಾಡಿವೆ. ಅಂದುಕೊಂಡಂತೆ ಎಲ್ಲ ಕೆಲಸಗಳು ಪೂರ್ಣಗೊಂಡರೆ, ‘ರಣಬಲಿ’ ಸಿನಿಮಾ ಮುಂಬರುವ ಅಕ್ಟೋಬರ್ 16 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.