ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್-2026) ಕಾರ್ಯ ಚುರುಕುಗೊಂಡಿದ್ದು, 18 ವರ್ಷ ಮೇಲ್ಪಟ್ಟ ಯಾವೊಬ್ಬ ಅರ್ಹ ನಾಗರಿಕನೂ ಮತದಾರರ ಪಟ್ಟಿಯಿಂದ ವಂಚಿತನಾಗದಂತೆ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ನೋಂದಣಿ ಅಭಿಯಾನದ ಪ್ರಗತಿಯನ್ನು ಪರಿಶೀಲಿಸಲು ಅವರು ಖುದ್ದು ವಿವಿಧ ಕೇಂದ್ರಗಳಿಗೆ ಭೇಟಿ ನೀಡಿದರು.
ವಿವಿಧ ಬೂತ್‌ಗಳಿಗೆ ಭೇಟಿ: ನಮೂನೆ-6 ವಿತರಣೆ
ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಂತಲಾನಗರ ವಾರ್ಡ್‌ನ ಬಾಲ್ಡ್‌ವಿನ್ ಗರ್ಲ್ಸ್ ಶಾಲೆಯ ಬೂತ್ ಸಂಖ್ಯೆ 47 ಮತ್ತು 48 ಹಾಗೂ ಆಸ್ಟಿನ್ ಟೌನ್‌ನ ಸರ್ಕಾರಿ ತಮಿಳು ಮತ್ತು ಆಂಗ್ಲ ಪ್ರೌಢಶಾಲೆಯ ವಿಚಾರಣಾ ಕೇಂದ್ರಗಳಿಗೆ ಭೇಟಿ ನೀಡಿದ ಮುಖ್ಯ ಚುನಾವಣಾಧಿಕಾರಿಗಳು, ಎಸ್‌ಐಆರ್ ನೋಟಿಸ್‌ಗಳ ವಿಚಾರಣೆ, ನಮೂನೆ-6 ವಿತರಣೆ ಮತ್ತು ನೋಂದಣಿ ಪ್ರಕ್ರಿಯೆಗಳನ್ನು ಖುದ್ದು ಪರಿಶೀಲಿಸಿದರು. ಇದೇ ವೇಳೆ ಲ್ಯಾಂಗ್‌ಫೋರ್ಡ್ ರಸ್ತೆಯ ಅಪಾರ್ಟ್‌ಮೆಂಟ್‌ಗಳಿಗೆ ತೆರಳಿ ಸಾರ್ವಜನಿಕರಿಗೆ ನಮೂನೆ-6 ಅರ್ಜಿಗಳನ್ನು ವಿತರಿಸಿ, ಅರ್ಜಿ ಭರ್ತಿ ಮಾಡಲು ನೆರವಾಗುವಂತೆ ಸ್ಥಳದಲ್ಲಿದ್ದ ಕಂದಾಯ ಸಿಬ್ಬಂದಿಗೆ ನಿರ್ದೇಶನ ನೀಡಿದರು.
ಸಾರ್ವಜನಿಕರೊಂದಿಗೆ ಸೌಜನ್ಯ ಹಾಗೂ ಬಿಎಲ್‌ಒಗಳಿಗೆ ರಕ್ಷಣೆ
ಮತದಾರರ ಗುರುತಿನ ಚೀಟಿ ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಪ್ರತಿಪಾದಿಸಿದ ಅವರು, ವಿಚಾರಣಾ ಕೇಂದ್ರಗಳಿಗೆ ಬರುವ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಯುವಕರೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯಂತ ತಾಳ್ಮೆ ಮತ್ತು ಸೌಜನ್ಯದಿಂದ ನಡೆದುಕೊಳ್ಳಬೇಕು. ಮೂಲಸೌಕರ್ಯ, ಕುಡಿಯುವ ನೀರು ಒದಗಿಸಿ, ಅವರ ಸಮಯ ವ್ಯರ್ಥವಾಗದಂತೆ ತ್ವರಿತವಾಗಿ ಕೆಲಸ ಮುಗಿಸಿಕೊಡಬೇಕು. ಅನಕ್ಷರಸ್ಥರಿಗೆ ಅರ್ಜಿ ಭರ್ತಿ ಮಾಡಲು ನೆರವು ನೀಡಬೇಕು ಎಂದು ತಾಕೀತು ಮಾಡಿದರು. ಇದೇ ವೇಳೆ, ತಳಮಟ್ಟದಲ್ಲಿ ಶ್ರಮಿಸುತ್ತಿರುವ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಮಾತೃ ಇಲಾಖೆಯಾಗಲಿ ಅಥವಾ ಚುನಾವಣಾ ಉಸ್ತುವಾರಿ ಅಧಿಕಾರಿಗಳಾಗಲಿ ಯಾವುದೇ ಕಿರುಕುಳ ನೀಡದೆ, ಅವರೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ನೋಂದಣಾಧಿಕಾರಿಗಳಿಗೆ ಸ್ಪಷ್ಟಪಡಿಸಿದರು.
ತ್ವರಿತ ಮತ್ತು ದೋಷಮುಕ್ತ ಕಾರ್ಯಕ್ಕೆ ಕರೆ
ಎಂ.ಜಿ. ರಸ್ತೆಯ ಪಿಯುಬಿ ಕಟ್ಟಡದ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ವಿ. ಅನ್ಬುಕುಮಾರ್, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಪ್ರಕ್ರಿಯೆಯನ್ನು ಒಂದು ತಂಡವಾಗಿ ಶ್ರಮಿಸಿ ಯಶಸ್ವಿಗೊಳಿಸಲು ಕರೆ ನೀಡಿದರು. ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ. ಮಾತನಾಡಿ, ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಸ್‌ಐಆರ್ ಕಾರ್ಯವನ್ನು ಪೂರ್ಣಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಅಪರ ಆಯುಕ್ತ ವೆಂಕಟಾಚಲಪತಿ, ಕಂದಾಯ ಅಪರ ಆಯುಕ್ತರಾದ ಲಕ್ಷ್ಮಮ್ಮ, ಜಂಟಿ ಆಯುಕ್ತರಾದ ರಂಗನಾಥ್ ಕೆ., ಹೇಮಂತ್ ಶರಣ್, ಚುನಾವಣಾ ತಹಶೀಲ್ದಾರ್ ವಿಭಾ ರಾಠೋಡ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.