ಬೆಂಗಳೂರು: ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 869 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವರ್ಗೀಕರಣ ಮತ್ತು ಮೀಸಲಾತಿ ವಿವರ
ಒಟ್ಟು 869 ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ 293 ಹುದ್ದೆಗಳು ಮೀಸಲಾಗಿದ್ದು, ಉಳಿಕೆ ಮೂಲ ವೃಂದಕ್ಕೆ 576 ಹುದ್ದೆಗಳನ್ನು ನಿಗದಿಪಡಿಸಲಾಗಿದೆ.
-
ಉಳಿಕೆ ಮೂಲ ವೃಂದ (RPC): ವಾರ್ಡರ್ - 560 ಹಾಗೂ ದ್ವಿತೀಯ ದರ್ಜೆ ಬೋಧಕರು - 16 ಹುದ್ದೆಗಳು.
-
ಕಲ್ಯಾಣ ಕರ್ನಾಟಕ ವೃಂದ (KKR): ಜೈಲರ್ - 5, ವಾರ್ಡರ್ - 275, ದ್ವಿತೀಯ ದರ್ಜೆ ಬೋಧಕರು - 8 ಮತ್ತು ವಾರ್ಡರ್ ಕಮ್ ನರ್ಸಿಂಗ್ - 5 ಹುದ್ದೆಗಳು ಸೇರಿವೆ.
ವಿದ್ಯಾರ್ಹತೆ ಮತ್ತು ವಯೋಮಿತಿ ನಿಬಂಧನೆಗಳು
ಜೈಲರ್ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ವಾರ್ಡರ್ ಹುದ್ದೆಗೆ ಎಸ್‌ಎಸ್‌ಎಲ್‌ಸಿ, ದ್ವಿತೀಯ ದರ್ಜೆ ಬೋಧಕ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಅಥವಾ ಡಿಪ್ಲೊಮಾ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ವಾರ್ಡರ್ ಕಮ್ ನರ್ಸಿಂಗ್ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಜೊತೆಗೆ ಪ್ರಥಮ ಚಿಕಿತ್ಸಾ ಪ್ರಮಾಣಪತ್ರ (First Aid Certificate) ಹೊಂದಿರುವುದು ಕಡ್ಡಾಯ. ಅರ್ಜಿ ಸಲ್ಲಿಸುವ ಆಕಾಂಕ್ಷಿಗಳಿಗೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 33 ವರ್ಷ ವಯೋಮಿತಿ ನಿಗದಿಮಾಡಲಾಗಿದೆ.
ಆಯ್ಕೆ ಪ್ರಕ್ರಿಯೆ ಮತ್ತು ನೆಗೆಟಿವ್ ಅಂಕಗಳು
ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ನಡೆಸಲಾಗಲಿದ್ದು, ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದು ಭಾಗದಷ್ಟು (0.25) ನೆಗೆಟಿವ್ ಅಂಕಗಳನ್ನು ಕಳೆಯಲಾಗುತ್ತದೆ. ಲಿಖಿತ ಪರೀಕ್ಷೆಯ ಜತೆಗೆ ದೇಹದಾರ್ಢ್ಯತೆ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆಗಳನ್ನು ನಡೆಸಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ ಮತ್ತು ಮುಖ್ಯ ದಿನಾಂಕಗಳು
ಸಾಮಾನ್ಯ ವರ್ಗ, ಒಬಿಸಿ ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ₹750 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ₹500 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಸೆಪ್ಟೆಂಬರ್ 19ರಿಂದಲೇ ಆನ್‌ಲೈನ್ ನೋಂದಣಿ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿದೆ. ನವೆಂಬರ್ 21ರಂದು ರಾಜ್ಯಾದ್ಯಂತ ಲಿಖಿತ ಪರೀಕ್ಷೆಗಳು ಜರುಗಲಿವೆ. ಆಸಕ್ತರು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ cetonline.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.