ಬೆಂಗಳೂರು : ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ರೈತರು ಹಾಗೂ ಗ್ರಾಮೀಣ ಜನತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಕೇವಲ ಘೋಷಣೆಗಳಲ್ಲೇ ಕಾಲ ಕಳೆಯುತ್ತಿದೆ. ಸೆ. 21ರಿಂದ ಆರಂಭವಾಗಲಿರುವ ವಿಶೇಷ ಅಧಿವೇಶನಕ್ಕೂ ಮುನ್ನವೇ ಸರ್ಕಾರ ತನ್ನ ಬದ್ಧತೆಯನ್ನು ಕಾರ್ಯರೂಪದಲ್ಲಿ ತೋರಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೋಟೆ ಕೊಳ್ಳೆ ಹೊಡೆದು ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ” ಎಂದು ವಾಗ್ದಾಳಿ ನಡೆಸಿದರು.
“ಬರಗಾಲ ಬಂದು ತಿಂಗಳುಗಳೇ ಕಳೆದಿವೆ. ರೈತರು ಬೆಳೆ ನಷ್ಟದಿಂದ ಸಂಕಷ್ಟದಲ್ಲಿದ್ದಾರೆ. ನಾವು ಪ್ರತಿ ಎಕರೆಗೆ ₹50,000 ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕ್ಷೇತ್ರಗಳಿಗೆ ತಲಾ ₹10 ಕೋಟಿ ಬಿಡುಗಡೆ ಮಾಡಿ, ತುರ್ತು ಬೋರ್‌ವೆಲ್ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದೇವೆ. ಆದರೆ ಸರ್ಕಾರ ಈವರೆಗೆ ಸಮರ್ಪಕ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ,” ಎಂದು ಆರೋಪಿಸಿದರು.
“ಒಂದು ಕಡೆ ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸಲಾಗುತ್ತಿದೆ. ಮತ್ತೊಂದು ಕಡೆ ಬರಪೀಡಿತ ರೈತರಿಗೆ ತಕ್ಷಣದ ಪರಿಹಾರ ನೀಡಲು ಹಣವಿಲ್ಲ. ಇದು ಅಭಿವೃದ್ಧಿಯ ಸರ್ಕಾರವಲ್ಲ, ಘೋಷಣೆಗಳ ಸರ್ಕಾರ,” ಎಂದು ಟೀಕಿಸಿದರು.
ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆಯಲು ಮುಂದಾಗಿರುವುದನ್ನು ಉಲ್ಲೇಖಿಸಿದ ಅವರು, “ಚರ್ಚೆ ಮಾಡುವುದು ಸ್ವಾಗತಾರ್ಹ. ಆದರೆ ಚರ್ಚೆಗೂ ಮುನ್ನ ರೈತರಿಗೆ ಮತ್ತು ಜನರಿಗೆ ಸರ್ಕಾರದ ಬಳಿ ಹಣವಿದೆ, ಸರ್ಕಾರ ಕೆಲಸ ಮಾಡುತ್ತಿದೆ ಎಂಬ ವಿಶ್ವಾಸ ಮೂಡಬೇಕು. ಕನಿಷ್ಠ ಕುಡಿಯುವ ನೀರಿಗಾಗಿ ತಲಾ ₹10 ಕೋಟಿ ಬಿಡುಗಡೆ ಮಾಡಿ,” ಎಂದು ಒತ್ತಾಯಿಸಿದರು.
ಬರ ಪರಿಹಾರದ ಕುರಿತು ಶ್ವೇತಪತ್ರಕ್ಕೆ ಆಗ್ರಹ
“ಬರಗಾಲದ ಬಗ್ಗೆ ಸರ್ಕಾರದ ನಿಜವಾದ ಆರ್ಥಿಕ ಬದ್ಧತೆ ಏನು ಎಂಬುದು ಜನರಿಗೆ ತಿಳಿಯಬೇಕು. ರಾಜ್ಯದ ಹಣಕಾಸಿನ ಪರಿಸ್ಥಿತಿ, ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಇರುವ ಬಾಕಿ, ಸರ್ಕಾರದ ಸಾಲದ ಹೊರೆ ಹಾಗೂ ಗ್ಯಾರಂಟಿಗಳ ಹಣಕಾಸಿನ ಪರಿಣಾಮ ಸೇರಿದಂತೆ ಸಂಪೂರ್ಣ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ಸರ್ಕಾರ ಬಿಡುಗಡೆ ಮಾಡಬೇಕು,” ಎಂದು ಆರ್. ಅಶೋಕ್ ಆಗ್ರಹಿಸಿದರು.
“ಸರ್ಕಾರ ಡೆಫಿಸಿಟ್ ಬಜೆಟ್ ಮಂಡಿಸಿದೆ. ಖಜಾನೆಯ ಸ್ಥಿತಿ ಏನು, ಎಷ್ಟು ಬಾಕಿ ಇದೆ, ಯಾವ ಇಲಾಖೆಗೆ ಎಷ್ಟು ಹಣ ನೀಡಬೇಕಿದೆ ಎಂಬುದನ್ನು ಸರ್ಕಾರವೇ ಜನರ ಮುಂದೆ ಇಡಬೇಕು. ಕೇಂದ್ರ ಸರ್ಕಾರದ ನೆರವು ಕೇಳುವುದರಲ್ಲಿ ತಪ್ಪಿಲ್ಲ. ಆದರೆ ರಾಜ್ಯ ಸರ್ಕಾರ ಮೊದಲು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಪರಿಹಾರ ಬಿಡುಗಡೆ ಮಾಡಿ, ನಂತರ ಕೇಂದ್ರದಿಂದ ಹೆಚ್ಚುವರಿ ನೆರವು ಕೇಳಬೇಕು,” ಎಂದರು.
“ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವುದಾದರೆ, ‘ನಾವು ರಾಜ್ಯದಿಂದ ಇಷ್ಟು ಹಣ ಬಿಡುಗಡೆ ಮಾಡಿದ್ದೇವೆ; NDRF ನಿಯಮಗಳ ಪ್ರಕಾರ ಕೇಂದ್ರದಿಂದ ಇಷ್ಟು ನೆರವು ಬೇಕು’ ಎಂದು ಕೇಳುವ ಸ್ಥಿತಿಯಲ್ಲಿ ಸರ್ಕಾರ ಇರಬೇಕು,” ಎಂದು ಹೇಳಿದರು.
ಕಸ್ತೂರಿರಂಗನ್ ವರದಿಗೆ ಬಿಜೆಪಿ ವಿರೋಧ
ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಕುರಿತು ಬಿಜೆಪಿ ತನ್ನ ನಿಲುವನ್ನು ಸ್ಪಷ್ಟವಾಗಿ ಮಂಡಿಸಲಿದೆ ಎಂದು ಆರ್. ಅಶೋಕ್ ಹೇಳಿದರು.
“ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಅತ್ಯಂತ ಮುಖ್ಯ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಮಲೆನಾಡಿನ ಜನರ ಜೀವನ, ಕೃಷಿ, ಮೂಲಸೌಕರ್ಯ ಮತ್ತು ಬದುಕಿಗೆ ಅತಿಯಾದ ನಿರ್ಬಂಧಗಳು ಬರುವಂತಾಗಬಾರದು. ಸ್ಥಳೀಯ ಜನರ ಬದುಕು ಮತ್ತು ಪರಿಸರ, ಇವೆರಡನ್ನೂ ಸಮತೋಲನದಲ್ಲಿ ನೋಡಬೇಕು,” ಎಂದರು.
ಕಸ್ತೂರಿರಂಗನ್ ವರದಿಯ ಪ್ರಕ್ರಿಯೆಯ ಇತಿಹಾಸವನ್ನು ಉಲ್ಲೇಖಿಸಿದ ಅವರು, “UPA ಸರ್ಕಾರದ ಅವಧಿಯಲ್ಲಿ ಪಶ್ಚಿಮ ಘಟ್ಟಗಳ ಕುರಿತ ಗಾಡ್ಗೀಳ್ ವರದಿಯ ನಂತರ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ ರಚನೆಯಾಯಿತು. ಕಸ್ತೂರಿರಂಗನ್ ಸಮಿತಿ ತನ್ನ ವರದಿಯನ್ನು 2013ರಲ್ಲಿ ಸಲ್ಲಿಸಿತು. ಆದ್ದರಿಂದ ಇಂದು ಕಾಂಗ್ರೆಸ್ ಈ ವಿಚಾರದಲ್ಲಿ ಬಿಜೆಪಿ ಮೇಲೆ ಆರೋಪ ಮಾಡುವ ಮೊದಲು ತನ್ನದೇ ಹಿಂದಿನ ನಿಲುವು ಮತ್ತು ನಿರ್ಧಾರಗಳನ್ನು ಜನರಿಗೆ ವಿವರಿಸಬೇಕು,” ಎಂದರು.
“ನಮ್ಮ ಸರ್ಕಾರದ ಅವಧಿಯಲ್ಲಿಯೂ ಕಸ್ತೂರಿರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಈಗಲೂ ಬಿಜೆಪಿ ಅದೇ ನಿಲುವಿನಲ್ಲಿ ಇದೆ. ಮಲೆನಾಡಿನ ಜನರ ಹಿತಾಸಕ್ತಿಯನ್ನು ರಕ್ಷಿಸುವುದು ನಮ್ಮ ನಿಲುವು,” ಎಂದು ಹೇಳಿದರು.
ಮೂರು ದಿನ ಸಾಲದು; ಒಂದು ವಾರ ಅಧಿವೇಶನ ನಡೆಸಲಿ
“ಬರಗಾಲ ಮತ್ತು ಕಸ್ತೂರಿರಂಗನ್ ವರದಿಯಂತಹ ಮಹತ್ವದ ಎರಡು ವಿಚಾರಗಳನ್ನು ಕೇವಲ ಮೂರು ದಿನಗಳಲ್ಲಿ ಸಮಗ್ರವಾಗಿ ಚರ್ಚಿಸಲು ಸಾಧ್ಯವಿಲ್ಲ. ಆದ್ದರಿಂದ ನಾಳೆ ನಡೆಯಲಿರುವ ಬಿಸಿನೆಸ್ ಅಡ್ವೈಸರಿ ಕಮಿಟಿ ಸಭೆಯಲ್ಲಿ ಕನಿಷ್ಠ ಒಂದು ವಾರ ಅಧಿವೇಶನ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಲಿದೆ,” ಎಂದರು.
ಬರ ಮತ್ತು ಕಸ್ತೂರಿರಂಗನ್ ಹೊರತಾಗಿ KPSC ನೇಮಕಾತಿ ಕುರಿತ ಆರೋಪಗಳು, ಬಿಡದಿ ಟೌನ್‌ಶಿಪ್, NICE ಟೋಲ್ ಸೇರಿದಂತೆ ರಾಜ್ಯದ ಹಲವು ಪ್ರಮುಖ ವಿಚಾರಗಳನ್ನೂ ಚರ್ಚಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
KPSC ಅಭ್ಯರ್ಥಿಗಳ ಪ್ರತಿಭಟನೆಗೆ ಅವಕಾಶ ನೀಡದಿರುವ ಆರೋಪ
KPSC ಅಭ್ಯರ್ಥಿಗಳು ತಮ್ಮನ್ನು ಭೇಟಿ ಮಾಡಿ ಪ್ರತಿಭಟನೆಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಅಹವಾಲು ಸಲ್ಲಿಸಿದ್ದಾರೆ ಎಂದು ಆರ್. ಅಶೋಕ್ ಹೇಳಿದರು.
“ಪ್ರತಿಭಟನೆ ಮಾಡಲು ಸಂವಿಧಾನಾತ್ಮಕ ಹಕ್ಕಿದೆ. KPSC ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾರೇ ತಪ್ಪು ಮಾಡಿದ್ದರೂ, ಅವರು ಯಾವ ಪಕ್ಷದವರೇ ಆಗಿರಲಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಭ್ಯರ್ಥಿಗಳ ಅಹವಾಲುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು,” ಎಂದರು.
ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ
ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಬರ ಪರಿಹಾರ ಕಾಮಗಾರಿಗಳ ಕೊರತೆಯ ಕುರಿತು ಕೇಳಿಬರುತ್ತಿರುವ ಅಸಮಾಧಾನವನ್ನು ಉಲ್ಲೇಖಿಸಿದ ಅವರು, “ಸರ್ಕಾರದ ವಿರುದ್ಧ ಸ್ವತಃ ಆಡಳಿತ ಪಕ್ಷದ ಶಾಸಕರೇ ಧ್ವನಿ ಎತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದ ಸ್ಥಿತಿ ಶಾಸಕರಿಗೆ ಬಂದಿದ್ದರೆ, ಇದಕ್ಕೆ ಸರ್ಕಾರ ಉತ್ತರ ನೀಡಬೇಕು,” ಎಂದರು.
‘ವಂದೇ ಮಾತರಂ’ ವಿಚಾರದಲ್ಲಿ ಕಾಂಗ್ರೆಸ್ ನಿಲುವಿಗೆ ಪ್ರಶ್ನೆ
‘ವಂದೇ ಮಾತರಂ’ ಕುರಿತು ಮಾತನಾಡಿದ ಆರ್. ಅಶೋಕ್, “ದೇಶದ ಸ್ವಾತಂತ್ರ್ಯ ಹೋರಾಟದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ರಾಷ್ಟ್ರಗೀತೆಯ ಗೌರವದ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಒಂದು ಕಾಲದಲ್ಲಿ ರಾಜಕೀಯ ಒತ್ತಡಗಳ ಹಿನ್ನೆಲೆಯಲ್ಲಿ ಹಾಡಿನ ಕೆಲವು ಭಾಗಗಳನ್ನು ಕೈಬಿಡಲಾಯಿತು. ಇಂದು ಅದೇ ವಿಷಯವನ್ನು ಮತ್ತೆ ಚರ್ಚೆಗೆ ತರುತ್ತಿರುವಾಗ ಕಾಂಗ್ರೆಸ್ ತನ್ನ ಐತಿಹಾಸಿಕ ನಿಲುವನ್ನು ಜನರಿಗೆ ವಿವರಿಸಬೇಕು,” ಎಂದರು.
“ಜನರ ಭಾವನೆಗಳೊಂದಿಗೆ ರಾಜಕಾರಣ ಮಾಡುವುದು ಯಾರು ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ. ಆದರೆ ದೇಶದ ರಾಷ್ಟ್ರೀಯ ಸಂಕೇತಗಳು ಮತ್ತು ಸ್ವಾತಂತ್ರ್ಯ ಹೋರಾಟದ ಪರಂಪರೆಯ ವಿಚಾರದಲ್ಲಿ ರಾಜಕೀಯ ಲಾಭಕ್ಕಿಂತ ರಾಷ್ಟ್ರದ ಗೌರವ ಮುಖ್ಯ,” ಎಂದು ಹೇಳಿದರು.
ಅಂತಿಮವಾಗಿ, “ಸರ್ಕಾರ ಮೊದಲು ರೈತರಿಗೆ ಹಣ ಬಿಡುಗಡೆ ಮಾಡಲಿ, ಕುಡಿಯುವ ನೀರಿಗೆ ಹಣ ಬಿಡುಗಡೆ ಮಾಡಲಿ. ನಂತರ ಅಧಿವೇಶನದಲ್ಲಿ ಚರ್ಚೆ ಮಾಡಲಿ. ಜನರ ಸಂಕಷ್ಟಕ್ಕೆ ಪರಿಹಾರ ನೀಡುವುದು ಘೋಷಣೆಗಿಂತ ಮುಖ್ಯ,” ಎಂದು ಆರ್. ಅಶೋಕ್ ಹೇಳಿದರು.