ಪ್ರಕೃತಿಯಲ್ಲಿ ಸಿಗುವ ಅತ್ಯಂತ ಪೌಷ್ಟಿಕಾಂಶಯುಕ್ತ ಹಣ್ಣುಗಳಲ್ಲಿ ಸೀ ಬಕ್‌ಥಾರ್ನ್ ಒಂದಾಗಿದೆ. ಗಾಢ ಕಿತ್ತಳೆ ಬಣ್ಣ ಹಾಗೂ ವಿಶಿಷ್ಟ ಹುಳಿ-ಸಿಹಿ ರುಚಿ ಹೊಂದಿರುವ ಈ ಹಣ್ಣಿನ ಜ್ಯೂಸ್ ಅನ್ನು ಅತ್ಯಂತ ಸರಳವಾಗಿ ಮನೆಯಲ್ಲಿಯೇ ಸಿದ್ಧಪಡಿಸಬಹುದು. ತಾಜಾ ಅಥವಾ ಫ್ರೋಜನ್ ಸೀ ಬಕ್‌ಥಾರ್ನ್ ಹಣ್ಣುಗಳು ಲಭ್ಯವಿದ್ದರೆ ಕಡಿಮೆ ಸಮಯದಲ್ಲಿ ಈ ಜ್ಯೂಸ್ ತಯಾರಿಸಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು: ಎರಡು ಕಪ್ ತಾಜಾ ಅಥವಾ ಫ್ರೋಜನ್ ಸೀ ಬಕ್‌ಥಾರ್ನ್ ಹಣ್ಣುಗಳು, ಮೂರನೇ ಒಂದು ಕಪ್ ನೀರು, ಜೇನುತುಪ್ಪ ಅಥವಾ ಮೇಪಲ್ ಸಿರಪ್ ಹಾಗೂ ಹೆಚ್ಚುವರಿ ನೀರು.
ತಯಾರಿಸುವ ವಿಧಾನ: ಮೊದಲಿಗೆ ತಾಜಾ ಹಣ್ಣುಗಳನ್ನು ಬಳಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಎಲೆಗಳು ಹಾಗೂ ತೊಟ್ಟುಗಳನ್ನು ತೆಗೆದು ಶುಚಿಗೊಳಿಸಬೇಕು. ಫ್ರೋಜನ್ ಹಣ್ಣುಗಳಾಗಿದ್ದರೆ ಅವುಗಳನ್ನು ಕೊಂಚ ಸಮಯ ಹೊರಗಿಟ್ಟು ಕರಗಲು ಬಿಡಬೇಕು. ನಂತರ ಶುಚಿಗೊಳಿಸಿದ ಹಣ್ಣುಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಮೂರನೇ ಒಂದು ಕಪ್ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಬೇಕು.
ಬಳಿಕ ಒಂದು ಪಾತ್ರೆಯ ಮೇಲೆ ಸಣ್ಣ ರಂಧ್ರವಿರುವ ಜರಡಿ ಅಥವಾ ತೆಳುವಾದ ಮಸ್ಲಿನ್ ಬಟ್ಟೆಯನ್ನಿಟ್ಟು, ರುಬ್ಬಿದ ಮಿಶ್ರಣವನ್ನು ಅದಕ್ಕೆ ಸೋಸಿಕೊಳ್ಳಬೇಕು. ಸೌಟಿನಿಂದ ಹಿಂಡಿ ರಸವನ್ನು ಸಂಪೂರ್ಣವಾಗಿ ಪಾತ್ರೆಗೆ ಇಳಿಸಿದರೆ ಬೀಜ ಮತ್ತು ಸಿಪ್ಪೆಯು ಜರಡಿಯಲ್ಲಿ ಉಳಿದು, ದಪ್ಪಗಿನ ಕಿತ್ತಳೆ ಬಣ್ಣದ ನೈಸರ್ಗಿಕ ರಸ ಸಿಗುತ್ತದೆ. ಸೀ ಬಕ್‌ಥಾರ್ನ್ ಹುಳಿಯಾಗಿರುವುದರಿಂದ ಒಂದು ಭಾಗ ರಸಕ್ಕೆ ಮೂರು ಭಾಗ ನೀರು ಸೇರಿಸಿ ತೆಳುಗೊಳಿಸಬಹುದು. ಸಿಹಿ ಬೇಕಿದ್ದಲ್ಲಿ ಸ್ವಲ್ಪ ಜೇನುತುಪ್ಪ, ಮೇಪಲ್ ಸಿರಪ್ ಅಥವಾ ಸೇಬಿನ ರಸವನ್ನು ಬೆರೆಸಿ ತಕ್ಷಣವೇ ಸೇವಿಸಬಹುದು.